
ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಟಿ20 ಲೀಗ್ಗಳಲ್ಲಿ ನಿರತರಾಗಿರುವ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಬಿಗ್ ಬ್ಯಾಷ್ ಲೀಗ್ 2025-26 ರ 37 ನೇ ಪಂದ್ಯದಲ್ಲಿ, ಸಿಡ್ನಿ ಥಂಡರ್ ನಾಯಕ ಡೇವಿಡ್ ವಾರ್ನರ್ ಸಿಡ್ನಿ ಸಿಕ್ಸರ್ಸ್ ವಿರುದ್ಧ ಸ್ಫೋಟಕ ಶತಕ ಬಾರಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಥಂಡರ್ ತಂಡದ ಪರ ಅಬ್ಬರಿಸಿದ ಡೇವಿಡ್ ವಾರ್ನರ್ ಈ ಆವೃತ್ತಿಯ ಎರಡನೇ ಶತಕ ಬಾರಿಸಿದರು. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ 65 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು.

ವಾರ್ನರ್ ಅವರ ಈ ಸ್ಫೋಟಕ ಶತಕದಿಂದಾಗಿ ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ಥಂಡರ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತು. ಈ ಅದ್ಭುತ ಶತಕದೊಂದಿಗೆ ವಾರ್ನರ್, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಡೇವಿಡ್ ವಾರ್ನರ್ ತಮ್ಮ 10 ನೇ ಟಿ20 ಶತಕವನ್ನು ಗಳಿಸುವ ಮೂಲಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ವಾರ್ನರ್ ಅತಿ ಹೆಚ್ಚು ಟಿ20 ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಟಿ20ಕ್ರಿಕೆಟ್‌ನಲ್ಲಿ ಒಂಬತ್ತು ಶತಕಗಳನ್ನು ಬಾರಿಸಿದ್ದು ಇದೀಗ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ 22 ಶತಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಾಕ್ ಮಾಜಿ ನಾಯಕ ಬಾಬರ್ ಆಝಂ 11 ಶತಕಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

2025-26 ರ ಬಿಗ್ ಬ್ಯಾಷ್ ಲೀಗ್ ಸೀಸನ್‌ನಲ್ಲಿ ಕಳಪೆ ಆರಂಭ ಪಡೆದುಕೊಂಡಿದ್ದ ಡೇವಿಡ್ ವಾರ್ನರ್, ಕಳೆದ ನಾಲ್ಕು ಪಂದ್ಯಗಳಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಇದು ಅವರ ಸತತ ನಾಲ್ಕನೇ 50 ಪ್ಲಸ್ ಇನ್ನಿಂಗ್ಸ್ ಆಗಿದೆ. ಅವರ ಹಿಂದಿನ ಮೂರು ಪಂದ್ಯಗಳಲ್ಲಿ, ಅವರು 82, 67* ಮತ್ತು ಅಜೇಯ 130 ರನ್ಗಳ ಇನ್ನಿಂಗ್ಸ್ ಆಡಿದ್ದರು.