
ಐಪಿಎಲ್ 2026 ರಲ್ಲಿ ಆಡಿರುವ 6 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಮೂರರಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದೀಗ ಹೊಸ ಆಟಗಾರನ ಆಗಮನವಾಗಿದೆ. ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ತಂಡವನ್ನು ಕೂಡಿಕೊಳ್ಳುತ್ತಿರುವ ಬೆನ್ನಲ್ಲೆ, ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ಅವರ ಬದಲಿಯಾಗಿ ಅದೇ ಇಂಗ್ಲೆಂಡ್ ತಂಡದ ಲೆಗ್-ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ಡೆಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಬೆನ್ ಡಕೆಟ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿಗೆ ಖರೀದಿಸಿತು. ಆದಾಗ್ಯೂ, ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಮೇಲೆ ಹೆಚ್ಚು ಗಮನಹರಿಸಲು ಮತ್ತು ಅವರ ಟೆಸ್ಟ್ ಫಾರ್ಮ್ ಅನ್ನು ಸುಧಾರಿಸಲು ಐಪಿಎಲ್‌ನಲ್ಲಿ ಆಡದಿರಲು ನಿರ್ಧರಿಸಿದರು. ಕೊನೆಯ ಕ್ಷಣದಲ್ಲಿ ಅವರು ಐಪಿಎಲ್‌ನಿಂದ ಹಿಂದೆ ಸರಿದ ಕಾರಣ, ಬಿಸಿಸಿಐ ಅವರನ್ನು ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ನಿಷೇಧಿಸಿದೆ.

ಹೀಗಾಗಿ ಬೆನ್ ಡಕೆಟ್ ಬದಲಿಗೆ 21 ವರ್ಷದ ರೆಹಾನ್ ಅಹ್ಮದ್ ಅವರನ್ನು ಡೆಲ್ಲಿ 75 ಲಕ್ಷಕ್ಕೆ ಖರೀದಿ ಮಾಡಿದೆ. ರೆಹಾನ್ ಅಹ್ಮದ್ ಬಲಗೈ ಲೆಗ್ ಸ್ಪಿನ್ನರ್ ಆಗಿದ್ದು, ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ ಐದು ಟೆಸ್ಟ್, ಒಂಬತ್ತು ಏಕದಿನ ಮತ್ತು 13 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಇಲ್ಲಿಯವರೆಗೆ 49 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ವಾಸ್ತವವಾಗಿ ರೆಹಾನ್ ಅಹ್ಮದ್ ಇಂಗ್ಲೆಂಡಿನ್ನವರಾದರೂ ಅವರ ಮೂಲ ಪಾಕಿಸ್ತಾನ. ರೆಹಾನ್ ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ ಜನಿಸಿದರಾದರೂ ಅವರ ಕುಟುಂಬ ಪಾಕಿಸ್ತಾನಿ ಮೂಲದವರು. ಅವರ ತಂದೆ ನಯೀಮ್ ಅಹ್ಮದ್ ಪಾಕಿಸ್ತಾನದಲ್ಲಿ ಜನಿಸಿದರು. ನಯೀಮ್ ಸ್ವತಃ ಮಾಜಿ ಕ್ರಿಕೆಟಿಗರಾಗಿದ್ದು ಜೀವನ ನಿರ್ವಹಣೆಗಾಗಿ 2001 ರಲ್ಲಿ ಇಂಗ್ಲೆಂಡ್‌ಗೆ ತೆರಳಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇಂದು, ಅವರ ಇಡೀ ಕುಟುಂಬವೇ ಇಂಗ್ಲೆಂಡ್‌ನಲ್ಲಿ ನೆಲೆಸಿದೆ.

ರೆಹಾನ್ 2022 ರಲ್ಲಿ ಕೇವಲ 18 ನೇ ವಯಸ್ಸಿನಲ್ಲಿ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರರಲ್ಲಿ ಒಬ್ಬರಾದರು. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಇದೇ ರೆಹಾನ್ ಅಹ್ಮದ್ ಪಾಕಿಸ್ತಾನ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು.