
ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಆರನೇ ಪಂದ್ಯವನ್ನು ಆಡಿದ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ 150 ರನ್‌ಗಳ ಜಯ ಸಾಧಿಸಿದೆ. ಎಂದಿನಂತೆ ಈ ಪಂದ್ಯದಲ್ಲೂ ಕರ್ನಾಟಕ ಪರ ಮಿಂಚಿದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ 82 ಎಸೆತಗಳಲ್ಲಿ 91 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಕೇವಲ 9 ರನ್ಗಳಿಂದ ಈ ಟೂರ್ನಿಯ ಐದನೇ ಶತಕದಿಂದ ವಂಚಿತರಾದರು. ಆದಾಗ್ಯೂ ಈ ಪಂದ್ಯದಲ್ಲಿ ಪಡಿಕ್ಕಲ್ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದರು.

ಪ್ರಸ್ತುತ ಈ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಲ್ಲಿ 600 ಕ್ಕೂ ಅಧಿಕ ರನ್ ಕಲೆಹಾಕಿರುವ ಪಡಿಕ್ಕಲ್, ವಿಜಯ್ ಹಜಾರೆ ಟ್ರೋಫಿಯ ಮೂವರು ಆವೃತ್ತಿಗಳಲ್ಲಿ 600 ಕ್ಕೂ ಹೆಚ್ಚು ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಮೈಲಿಗಲ್ಲು ಸ್ಥಾಪಿಸಿದ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಪಡಿಕ್ಕಲ್ ಕ್ರಮವಾಗಿ 2019-20 ಆವೃತ್ತಿಯಲ್ಲಿ 609 ರನ್ ಗಳಿಸಿದ್ದರೆ, 2020-21ರಲ್ಲಿ 737 ರನ್ ಕಲೆಹಾಕಿದ್ದರು. ಪ್ರಸ್ತುತ ಆವೃತ್ತಿಯಲ್ಲಿ 605 ರನ್ ಬಾರಿಸಿದ್ದಾರೆ.

ಈ ಆವೃತ್ತಿಯಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಪಡಿಕ್ಕಲ್ 605 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಭರ್ಜರಿ ಶತಕಗಳು ಹಾಗೂ ಒಂದು ಅರ್ಧಶತಕ ಸೇರಿದೆ. ಅಂದರೆ ಪಡಿಕ್ಕಲ್ ಆಡಿರುವ 6 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಹೊರತುಪಡಿಸಿ ಉಳಿದ 5 ಪಂದ್ಯಗಳಲ್ಲಿ ಶತಕ ಹಾಗೂ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.

2025-26ರ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಡಿಕ್ಕಲ್ ಜಾರ್ಖಂಡ್ ವಿರುದ್ಧ 147 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ನಂತರ ಕೇರಳ ವಿರುದ್ಧ 124 ರನ್, ತಮಿಳುನಾಡು ವಿರುದ್ಧ 22 ರನ್ ಗಳಿಸಿ ಔಟಾಗಿದ್ದರು. ನಂತರ ಪುದುಚೇರಿ ವಿರುದ್ಧ 113 ರನ್ ಬಾರಿಸಿದರೆ, ತ್ರಿಪುರ ವಿರುದ್ಧ 108 ರನ್ ಚಚ್ಚಿದ್ದರು. ಈಗ ರಾಜಸ್ಥಾನ ವಿರುದ್ಧ 91 ರನ್ ಬಾರಿಸಿದ ಪಡಿಕ್ಕಲ್ ಒಂಬತ್ತು ರನ್ಗಳಿಂದ ಶತಕ ವಂಚಿತರಾದರು.

ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪಡಿಕ್ಕಲ್ ಈ ಸ್ವರೂಪದಲ್ಲಿ ಸುಮಾರು 84 ರ ಸರಾಸರಿಯಲ್ಲಿ 2,600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಇದರಲ್ಲಿ 13 ಶತಕಗಳು ಮತ್ತು 13 ಅರ್ಧಶತಕಗಳು ಸೇರಿವೆ. ಆದಾಗ್ಯೂ, ಇದರ ಹೊರತಾಗಿಯೂ, ಅವರಿಗೆ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಲು ಅವಕಾಶ ಸಿಕ್ಕಿಲ್ಲ. ಈಗ, ಆಯ್ಕೆದಾರರು ಪಡಿಕ್ಕಲ್ ಅವರ ಈ ಪ್ರದರ್ಶನವನ್ನು ಎಷ್ಟು ಸಮಯದವರೆಗೆ ನಿರ್ಲಕ್ಷಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.