
ನ್ಯೂಝಿಲೆಂಡ್ ತಂಡದ ಅನುಭವಿ ಆಲ್ರೌಂಡರ್ ಡೌಗ್ ಬ್ರೇಸ್‌ವೆಲ್ (Doug Bracewell) ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಹಿಂದೆ ನ್ಯೂಝಿಲೆಂಡ್ ಪರ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಬ್ರೇಸ್‌ವೆಲ್ 18 ವರ್ಷಗಳ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ.

ಡೌಗ್ ಬ್ರೇಸ್‌ವೆಲ್ ನ್ಯೂಝಿಲೆಂಡ್ ಪರ 28 ಟೆಸ್ಟ್, 21 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 568 ರನ್ ಕಲೆಹಾಕುವುದರೊಂದಿಗೆ 74 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇನ್ನು 21 ಪಂದ್ಯಗಳಿಂದ 221 ರನ್ ಹಾಗೂ 26 ವಿಕೆಟ್ ಪಡೆದಿದ್ದಾರೆ. ಹಾಗೆಯೇ 20 ಟಿ20 ಮ್ಯಾಚ್ಗಳಲ್ಲಿ ನ್ಯೂಝಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಡೌಗ್ 126 ರನ್ ಜೊತೆ 20 ವಿಕೆಟ್ ಅನ್ನು ಸಹ ಕಬಳಿಸಿದ್ದಾರೆ.

ಅಷ್ಟೇ ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ನಲೂ ಡೌಗ್ ಬ್ರೇಸ್‌ವೆಲ್ ಕಾಣಿಸಿಕೊಂಡಿದ್ದರು. 2012 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಏಕೈಕ ಪಂದ್ಯವಾಡಿದ್ದ ಕಿವೀಸ್ ಆಲ್ರೌಂಡರ್ 4 ಓವರ್ಗಳಲ್ಲಿ 32 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಹಾಗೆಯೇ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲೂ ಅವರು ಕಣಕ್ಕಿಳಿದಿದ್ದರು.

ವಿಶೇಷ ಎಂದರೆ ಡೌಗ್ ಬ್ರೇಸ್‌ವೆಲ್ ಅವರ ಕುಟುಂಬಸ್ಥರೆಲ್ಲರೂ ನ್ಯೂಝಿಲೆಂಡ್ ಪರ ಆಡಿದ ಆಟಗಾರರು. ಅವರ ತಂದೆ ಬ್ರೆಂಡನ್ ಬ್ರೇಸ್‌ವೆಲ್ ಕಿವೀಸ್ ಪರ 7 ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ಅಂಕಲ್ ಜಾನ್ ಬ್ರೇಸ್‌ವೆಲ್ ನ್ಯೂಝಿಲೆಂಡ್ ಪರ 94 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

ಹಾಗೆಯೇ ಪ್ರಸ್ತುತ ನ್ಯೂಝಿಲೆಂಡ್ ತಂಡದಲ್ಲಿರುವ ಆಟಗಾರ ಮೈಕೆಲ್ ಬ್ರೇಸ್‌ವೆಲ್ ಡೌಗ್ ಬ್ರೇಸ್‌ವೆಲ್ ಅವರ ಕಸಿನ್ ಎಂಬುದು ವಿಶೇಷ. ಇನ್ನು ಡೌಗ್ ಬ್ರೇಸ್‌ವೆಲ್ ಅವರ ಇನ್ನಿಬ್ಬರು ಅಂಕಲ್ಗಳಾದ ಡೌಗಲ್ಸ್ ಬ್ರೇಸ್‌ವೆಲ್ ಹಾಗೂ ಮಾರ್ಕ್ ಬ್ರೇಸ್‌ವೆಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ 35 ವರ್ಷದ ಡೌಗ್ ಬ್ರೇಸ್‌ವೆಲ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.