
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ 15ನೇ ಪಂದ್ಯದಲ್ಲಿ ಎಡಗೈ ದಾಂಡಿಗ ಪ್ರಿಯಾಂಶ್ ಆರ್ಯ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪುರಾಣಿ ಡೆಲ್ಲಿ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ ಹಾಗೂ ಸಾರ್ಥಕ್ ರೇ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 101 ರನ್ಗಳ ಜೊತೆಯಾಟವಾಡಿದ ಬಳಿಕ ಸಾರ್ಥಕ್ (49) ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಸಿಡಿಲಬ್ಬರ ಮುಂದುವರೆಸಿದ ಪ್ರಿಯಾಂಶ್ ಆರ್ಯ ಪುರಾಣಿ ಡೆಲ್ಲಿ ಬೌಲರ್ಗಳ ಬೆಂಡೆತ್ತಿದರು. ಕೇವಲ 55 ಎಸೆತಗಳನ್ನು ಎದುರಿಸಿದ ಆರ್ಯ 7 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 107 ರನ್ ಬಾರಿಸಿದರು. ಈ ಸಿಡಿಲಬ್ಬರದ ಶತಕದ ನೆರವಿನಿಂದ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 235 ರನ್ ಕಲೆಹಾಕಿತು.

236 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪುರಾಣಿ ಡೆಲ್ಲಿ ತಂಡಕ್ಕೆ ಅರ್ನವ್ (36) ಹಾಗೂ ಅರ್ಪಿತ್ ರಾಣಾ (29) ಉತ್ತಮ ಆರಂಭ ನೀಡಿದ್ದರು. ಆದರೆ ಆ ಬಳಿಕ ಬಂದ ಬ್ಯಾಟರ್ಗಳು ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ ಪುರಾಣಿ ಡೆಲ್ಲಿ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 147 ರನ್ ಗಳಿಸಲಷ್ಟೇ ಶಕ್ತರಾದರು.

ಈ ಮೂಲಕ ಆಯುಷ್ ಬದೋನಿ ನಾಯಕತ್ವದ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡವು 88 ರನ್ಗಳ ಭರ್ಜರಿ ಜಯ ಸಾಧಿಸಿದೆ. ಅಲ್ಲದೆ ಈ ಪಂದ್ಯದಲ್ಲಿ 107 ರನ್ಗಳನ್ನು ಬಾರಿಸಿದ ಎಡಗೈ ಬ್ಯಾಟರ್ ಪ್ರಿಯಾಂಶ್ ಆರ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.