Duleep Trophy 2024: ಧೋನಿ ದಾಖಲೆ ಸರಿಗಟ್ಟಿದ ಧ್ರುವ್ ಜುರೇಲ್
Dhruv Jurel: ಧ್ರುವ್ ಜುರೇಲ್ ಟೀಮ್ ಇಂಡಿಯಾ ಪರ 3 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಅರ್ಧಶತಕದೊಂದಿಗೆ ಒಟ್ಟು 90 ರನ್ ಕಲೆಹಾಕಿದ್ದರು. ಇದೀಗ ದೇಶೀಯ ಅಂಗಳದ ಮೊದಲ ಪಂದ್ಯದಲ್ಲೇ ಅದ್ಭುತ ವಿಕೆಟ್ ಕೀಪಿಂಗ್ನೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
1 / 5
ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಯುವ ವಿಕೆಟ್ ಕೀಪರ್ ಧ್ರುವ್ ಜುರೇಲ್ ಹೊಸ ದಾಖಲೆ ಬರೆದಿದ್ದಾರೆ. ಅದು ಸಹ ಲೆಜೆಂಡ್ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯ ದೇಶೀಯ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
2 / 5
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭಾರತ ಬಿ ವಿರುದ್ಧದ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿದ ವಿಕೆಟ್ ಕೀಪರ್ ಧ್ರುವ್ ಜುರೇಲ್ ದ್ವಿತೀಯ ಇನಿಂಗ್ಸ್ನಲ್ಲಿ ಒಟ್ಟು 7 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಮೂಲಕ ದುಲೀಪ್ ಟ್ರೋಫಿಯ ಇನಿಂಗ್ಸ್ವೊಂದರಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.
3 / 5
ಮಹೇಂದ್ರ ಸಿಂಗ್ ಧೋನಿ 2004 ರಲ್ಲಿ ನಡೆದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದರು. ಸೆಂಟ್ರಲ್ ಝೋನ್ ವಿರುದ್ಧದ ಪಂದ್ಯದಲ್ಲಿ ಈಸ್ಟ್ ಝೋನ್ ಪರ ಕಣಕ್ಕಿಳಿದಿದ್ದ ಧೋನಿ ಒಟ್ಟು 7 ಕ್ಯಾಚ್ಗಳನ್ನು ಹಿಡಿದು ದೇಶೀಯ ಅಂಗಳದಲ್ಲಿ ದಾಖಲೆ ನಿರ್ಮಿಸಿದ್ದರು.
4 / 5
ಇದೀಗ 20 ವರ್ಷಗಳ ಬಳಿಕ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಧ್ರುವ್ ಜುರೇಲ್ ಯಶಸ್ವಿಯಾಗಿದ್ದಾರೆ. ಭಾರತ ಎ ತಂಡದ ಪರ ಅತ್ಯುತ್ತಮ ಕೀಪಿಂಗ್ ಪ್ರದರ್ಶಿಸಿದ ಧ್ರುವ್ ಒಟ್ಟು 7 ಕ್ಯಾಚ್ಗಳನ್ನು ಹಿಡಿದು ಭಾರತ ಬಿ ತಂಡವು 184 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
5 / 5
ಇನ್ನು ಧ್ರುವ್ ಜುರೇಲ್ ಹಿಡಿದ 7 ಕ್ಯಾಚ್ಗಳಲ್ಲಿ 4 ಕ್ಯಾಚ್ಗಳು ಆಕಾಶ್ ದೀಪ್ ಓವರ್ನಲ್ಲಿ ಮೂಡಿಬಂದಿದ್ದು ವಿಶೇಷ. ಈ ಜುಗಲ್ಬಂಧಿಯೊಂದಿಗೆ ಆಕಾಶ್ ದೀಪ್ ಇದೇ ಇನಿಂಗ್ಸ್ನಲ್ಲಿ 14 ಓವರ್ಗಳಲ್ಲಿ 56 ರನ್ ನೀಡಿ 5 ವಿಕೆಟ್ಗಳ ಸಾಧನೆಯನ್ನು ಸಹ ಮಾಡಿದರು.