
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸವನ್ನು 2025 ರಲ್ಲೇ ಮಾಡಬೇಕಿತ್ತು. ಆ ಪ್ರವಾಸದಲ್ಲಿ ಭಾರತ ತಂಡ ಏಕದಿನ ಹಾಗೂ ಟಿ20 ಸರಣಿಯನ್ನು ಆಡಬೇಕಿತ್ತು. ಆದರೆ ಆ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಿಂದಾಗಿ ಟೀಂ ಇಂಡಿಯಾದ ಪ್ರವಾಸವನ್ನು ಬಿಸಿಸಿಐ ಮುಂದೂಡಿತ್ತು.

ಈ ವರ್ಷವೂ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡುವುದು ಅಸಾಧ್ಯ ಎಂಬ ವರದಿಗಳಿದ್ದವು. ಏಕೆಂದರೆ, ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂಗಳ ಮೇಲಿನ ಹಿಂಸಾಚಾರ ಅತಿರೇಕಕ್ಕೆ ಹೋಗಿದೆ. ಹೀಗಾಗಿ ಬಾಂಗ್ಲಾದೇಶದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂಬುದು ಭಾರತೀಯರ ಆಗ್ರಹವಾಗಿದೆ.

ಇದೆಲ್ಲದರ ನಡುವೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಉಲ್ಲೇಖಿಸಿ, ಟೀಂ ಇಂಡಿಯಾ ಸೆಪ್ಟೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಲಿದ್ದು, ಈ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ ಎಂದು ಕ್ರಿಕ್ಬಝ್ ವರದಿ ಮಾಡಿತ್ತು.

ಆದರೆ ಈ ವರದಿ ಬಹಿರಂಗವಾದ ಒಂದು ದಿನದ ಬಳಿಕ ಬಿಸಿಸಿಐ, ಬಾಂಗ್ಲಾದೇಶ ಆಟಗಾರನನ್ನು ಐಪಿಎಲ್ನಿಂದ ಹೊರಹಾಕಿತ್ತು. ಇದೀಗ ಇದರ ಜೊತೆಗೆ ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮತ್ತೆ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬಾಂಗ್ಲಾದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಿಸಿಸಿಐ, ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಬಾಂಗ್ಲಾ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಿದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮಂಡಳಿಯು ಈಗ ಈ ವಿಷಯವನ್ನು ಭಾರತ ಸರ್ಕಾರದೊಂದಿಗೆ ಚರ್ಚಿಸಿ ಅವರ ಸಲಹೆಯ ಆಧಾರದ ಮೇಲೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲ್ಲಿದ್ದು, ಆ ನಂತರ ತನ್ನ ನಿರ್ಧಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ತಿಳಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಸಿಸಿಐ ಈ ಪ್ರವಾಸವನ್ನು ಮುಂದೂಡಿದರೆ, ಅದು ಬಿಸಿಬಿಗೆ ಸಾಕಷ್ಟು ನಷ್ಟವನ್ನುಂಟುಮಾಡಬಹುದು. ಈಗಾಗಲೇ ಆರ್ಥಿಕವಾಗಿ ದುರ್ಬಲವಾಗಿರುವ ಬಾಂಗ್ಲಾ ಮಂಡಳಿಯು, ಭಾರತ ಪ್ರವಾಸದಿಂದ ಆದಾಯ ಗಳಿಸುವ ನಿರೀಕ್ಷಿಸುತ್ತಿತ್ತು. ಆದರೆ ಈ ಪ್ರವಾಸವನ್ನು ರದ್ದುಗೊಳಿಸುವುದರಿಂದ ಬಾಂಗ್ಲಾದೇಶ ಮಂಡಳಿಗೆ ಪ್ರಾಯೋಜಕತ್ವ ಮತ್ತು ಪ್ರಸಾರ ಒಪ್ಪಂದಗಳಿಂದ ಲಕ್ಷಾಂತರ ರೂಪಾಯಿಗಳ ನಷ್ಟವಾಗಬಹುದು. ಇದಲ್ಲದೆ, ಈ ಸರಣಿಯು ಭವಿಷ್ಯದಲ್ಲೂ ನಡೆಯದಿದ್ದರೆ, ಮಂಡಳಿಯ ಆದಾಯದ ಮೇಲೆ ಪರಿಣಾಮ ಬೀರುವುದು ಖಚಿತ.