
ಮಹಿಳಾ ಪ್ರೀಮಿಯರ್ ಲೀಗ್ನ 4ನೇ ಆವೃತ್ತಿ 2026 ರ ಜನವರಿ 9 ರಿಂದ ಆರಂಭವಾಗುತ್ತಿದೆ. ಲೀಗ್ನ ಮೊದಲ ಪಂದ್ಯ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಈ ಲೀಗ್ಗಾಗಿ ಈಗಾಗಲೇ ಎಲ್ಲಾ ತಂಡಗಳು ತಮ್ಮ ತಯಾರಿಯನ್ನು ಅಂತಿಮಗೊಳಿಸುತ್ತಿವೆ. ಇದೆಲ್ಲದರ ನಡುವೆ ಈ ಲೀಗ್ನ ಮೂರು ಪ್ರಮುಖ ತಂಡಗಳಿಗೆ ಬಿಗ್ ಶಾಕ್ ಎದುರಾಗಿದೆ.

ಅದೆನೆಂದರೆ, ಆಸ್ಟ್ರೇಲಿಯಾದ ಇಬ್ಬರು ಪ್ರಮುಖ ಆಟಗಾರ್ತಿಯರು ಹಾಗೂ ಯುಎಸ್ಎ ತಂಡದ ಒರ್ವ ಆಟಗಾರ್ತಿ ಮಹಿಳಾ ಪ್ರೀಮಿಯರ್ ಲೀಗ್ 2026 ರಿಂದ ಹಿಂದೆ ಸರಿದಿದ್ದಾರೆ. ಆಲ್‌ರೌಂಡರ್ ಎಲಿಸ್ ಪೆರ್ರಿ ಮತ್ತು ಬೌಲರ್ ಅನ್ನಾಬೆಲ್ ಸದರ್ಲ್ಯಾಂಡ್ ವೈಯಕ್ತಿಕ ಕಾರಣಗಳನ್ನು ನೀಡಿ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಹಾಗೆಯೇ ಎಡಗೈ ಮಧ್ಯಮ ವೇಗಿ ತಾರಾ ನಾರ್ರಿಸ್ ಅವರನ್ನು ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ಅರ್ಹತಾ ಪಂದ್ಯಗಳಿಗೆ ಯುಎಸ್ಎ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪರಿಣಾಮವಾಗಿ, ಅವರು ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಆಲ್‌ರೌಂಡರ್ ಎಲಿಸ್ ಪೆರ್ರಿ ಒಂದು ಬಾರಿಯ ಚಾಂಪಿಯನ್ ಆರ್‌ಸಿಬಿ ಪರ ಆಡುತ್ತಿದ್ದರೆ, ಅನ್ನಾಬೆಲ್ ಸದರ್ಲ್ಯಾಂಡ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ. ಮಧ್ಯಮ ವೇಗಿ ತಾರಾ ನಾರ್ರಿಸ್ ಯುಪಿ ವಾರಿಯರ್ಸ್ ತಂಡದ ಪರ ಆಡುತ್ತಿದ್ದರು. ಹೀಗಾಗಿ ಈ ಮೂವರ ಅಲಭ್ಯತೆಯಿಂದಾಗಿ ತಂಡಗಳು ಕೂಡ ಬದಲಿ ಆಟಗಾರ್ತಿಯರನ್ನು ಹೆಸರಿಸಿವೆ.

ತಾರಾ ನಾರ್ರಿಸ್ ಬದಲಿಗೆ ಯುಪಿ ವಾರಿಯರ್ಸ್ ತಂಡ ಆಸ್ಟ್ರೇಲಿಯಾದ ಆಲ್‌ರೌಂಡರ್ ಚಾರ್ಲಿ ನಾಟ್ ಅವರನ್ನು ಬದಲಿಯಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಎಲಿಸ್ ಪೆರ್ರಿ ಬದಲಿಗೆ ಆರ್‌ಸಿಬಿ ಸಯಾಲಿ ಸತ್‌ಘರೆ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಸದರ್ಲ್ಯಾಂಡ್ ಬದಲಿಗೆ ಅಲಾನಾ ಕಿಂಗ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.