
ನ್ಯಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಆದರೂ 2-1 ಅಂತರದಿಂದ ಸರಣಿ ಗೆದ್ದ ಸಾಧನೆ ಮಾಡಿದೆ. ಆಂಗ್ಲರು ನೀಡಿದ್ದ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಲು ವಿಫಲವಾದ ಟೀಮ್ ಇಂಡಿಯಾ ಸರಣಿ ಕ್ಲೀನ್ಸ್ವೀಪ್ ಮಾಡುವಲ್ಲಿ ಎಡವಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿಲ್ಲ, ಆದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಡೇವಿಡ್ ಮಲನ್ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಭರ್ಜರಿ ಜೊತೆಯಾಟ ಆಡಿದರು. ಮಲನ್ 77 ರನ್ ಚಚ್ಚಿದರೆ, ಲಿಯಾಮ್ ಅಜೇಯ 42 ರನ್ ಕಲೆಹಾಕಿದರು.

ಇಂಗ್ಲೆಂಡ್ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಭಾರತ ಪರ ರವಿ ಬಿಷ್ಟೋಯ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಿತ್ತರೆ, ಆವೇಶ್ ಖಾನ್ ಹಾಗೂ ಉಮ್ರಾನ್ ಮಲಿಕ್ ತಲಾ 1 ವಿಕೆಟ್ ಪಡೆದರು.

ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಭಾರತ 50ಕ್ಕೂ ಮುನ್ನವೇ ಮುಖ್ಯ 3 ವಿಕೆಟ್ ಕಳೆದುಕೊಂಡಿತು. ಆದರೆ, ಸೂರ್ಯ ಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಅದರಲ್ಲೂ ಸೂರ್ಯ ಸ್ಫೋಟಕ ಬ್ಯಾಟಿಂಗ್ ನಡೆಸಿ ಆಕರ್ಷಕ ಶತಕ ಸಿಡಿಸಿದರು. ಆದರೆ, ಇದು ಫಲ ಸಿಗಲಿಲ್ಲ. ಸೂರ್ಯ 55 ಎಸೆತಗಳಲ್ಲಿ 14 ಫೋರ್, 6 ಸಿಕ್ಸರ್ ಸಿಡಿಸಿ 117 ರನ್ಗೆ ಔಟಾಗುವ ಮೂಲಕ ಭಾರತದ ಸೋಲು ಖಚಿತವಾಯಿತು. ಟೀಮ್ ಇಂಡಿಯಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.
Published On - 9:41 am, Mon, 11 July 22