ENG vs IRE: ಚೊಚ್ಚಲ ದ್ವಿಶತಕ ಸಿಡಿಸಿ 41 ವರ್ಷಗಳ ಹಳೆಯ ದಾಖಲೆ ಮುರಿದ ಇಂಗ್ಲೆಂಡ್ ಬ್ಯಾಟರ್..!
ENG vs IRE: ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಬಂದ ಬಂದವರೆಲ್ಲ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಅಂತಹ ಕೆಲವು ಪ್ರಮುಖ ದಾಖಲೆಗಳ ವಿವರ ಇಲ್ಲಿದೆ.
1 / 6
ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಗೂ ಮುನ್ನ ಐರ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್ ಭರ್ಜರಿ ತಯಾರಿ ಆರಂಭಿಸಿದೆ. ಈಗಾಗಲೇ 2ನೇ ದಿನದಾಟ ಮುಗಿದಿದ್ದು, 2ನೇ ಇನ್ನಿಂಗ್ಸ್ ಆರಂಭಿಸಿರುವ ಐರ್ಲೆಂಡ್ 97 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ.
2 / 6
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 172 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಆ ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಬಂದ ಬಂದವರೆಲ್ಲ ಭರ್ಜರಿ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಅಂತಹ ಕೆಲವು ಪ್ರಮುಖ ದಾಖಲೆಗಳ ವಿವರ ಇಲ್ಲಿದೆ.
3 / 6
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನ ಕೇವಲ 207 ಎಸೆತಗಳಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಒಲಿ ಪೋಪ್, ಆಂಗ್ಲರ ನೆಲದಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಈ ಹಿಂದೆ ಓವಲ್‌ನಲ್ಲಿ ಭಾರತದ ವಿರುದ್ಧ 220 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ಇಯಾನ್ ಬೋಥಮ್ ಅವರ ಹೆಸರಲ್ಲಿ ಈ ದಾಖಲೆ ಇತ್ತು.
4 / 6
ಇನ್ನು ಇಂಗ್ಲೆಂಡ್ ಪರ 182 ರನ್ಗಳ ಇನ್ನಿಂಗ್ಸ್ ಆಡಿದ ಬೆನ್ ಡಕೆಟ್, ರನ್-ಎ ಬಾಲ್ ಅಂದರೆ, 150 ಎಸೆತಗಳಲ್ಲಿ 150 ರನ್ ಬಾರಿಸುವ ಮೂಲಕ ಲಾರ್ಡ್ಸ್‌ನಲ್ಲಿ ಅತಿವೇಗದ ಟೆಸ್ಟ್ 150 ರನ್ ಪೂರೈಸಿದ ದಾಖಲೆ ಕೂಡ ಬರೆದರು. ಈ ಮೊದಲು ಈ ದಾಖಲೆ 166 ಎಸೆತಗಳಲ್ಲಿ 150 ರನ್ ಪೂರೈಸಿದ್ದ ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ ಅವರ ಹೆಸರಿನಲ್ಲಿತ್ತು.
5 / 6
ಇವರಿಬ್ಬರನ್ನು ಹೊರತುಪಡಿಸಿ, ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಕೂಡ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 56 ರನ್ ಸಿಡಿಸಿದ ರೂಟ್, ತಮ್ಮ ಟೆಸ್ಟ್ ವೃತ್ತಿ ಜೀವನದ 11,000 ರನ್‌ಗಳನ್ನು ಪೂರೈಸಿದರು. ಈ ಮೂಲಕ ಇಂಗ್ಲೆಂಡ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.
6 / 6
ಸದ್ಯ ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್, ಈ ಪಂದ್ಯದ ನಂತರ ಆಸೀಸ್ ವಿರುದ್ಧ ಆಶಸ್ ಸರಣಿಯನ್ನಾಡಲಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಆಶಸ್ ಟೆಸ್ಟ್ ಜೂನ್ 16 ರಂದು ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಆಸ್ಟ್ರೇಲಿಯಾ ಓವಲ್‌ನಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.
Published On - 1:05 pm, Sat, 3 June 23