Updated on:Jun 03, 2023 | 11:34 AM
ಧೋನಿ ತಂಡವನ್ನು ದಾಖಲೆಯ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೀಲಂಕಾದ ಯುವ ಕ್ರಿಕೆಟರ್ ಮತೀಶಾ ಪತಿರಾನ ಲಂಕಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ನಿನ್ನೆಯಿಂದ ಆರಂಭವಾಗಿರುವ ಏಕದಿನ ಸರಣಿಗೆ ಲಂಕಾ ತಂಡದಲ್ಲಿ ಪತಿರಾನಾಗೆ ಅವಕಾಶ ನೀಡಲಾಗಿದೆ.
ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದ ಪತಿರಾನ ತೀರ ದುಬಾರಿ ಎನಿಸಿಕೊಂಡರು. ಚೊಚ್ಚಲ ಪಂದ್ಯದಲ್ಲೇ ಪತಿರಾನ ಬೌಲಿಂಗ್ ಮಾಡಿದ ರೀತಿ ನೋಡಿದರೆ ಬೌಲಿಂಗ್ ಮಾಡುವುದನ್ನೇ ಮರೆತಂತಿದೆ. ತಮ್ಮ ಖೋಟಾದ 8.5 ಓವರ್‌ಗಳನ್ನು ಬೌಲ್ ಮಾಡಿದ ಪತಿರಾನ ಬರೋಬ್ಬರಿ 66 ರನ್ ಬಿಟ್ಟುಕೊಟ್ಟರು.
ಅಲ್ಲದೆ ತಮ್ಮ ಖೋಟಾದಲ್ಲಿ ಬರೋಬ್ಬರಿ 16 ವೈಡ್ ಬಾಲ್‌ಗಳನ್ನು ಎಸೆದು ಲಂಕಾ ತಂಡದ ಸೋಲಿಗೆ ಪ್ರಮುಖ ಕಾರಣವೂ ಆದರು. ಅಂತಿಮವಾಗಿ 55 ರನ್ ಬಾರಿಸಿದ್ದ ರಹಮತ್ ಶಾ ವಿಕೆಟ್ ಪಡೆಯುವಲ್ಲಿ ಪತಿರಾನ ಯಶಸ್ವಿಯಾದರಾದರೂ ಅಷ್ಟರಲ್ಲಿ ಪಂದ್ಯ ಲಂಕಾ ಕೈಯಿಂದ ಜಾರಿ ಹೋಗಿತ್ತು.
ಆಶ್ಚರ್ಯಕರ ಸಂಗತಿಯಿಂದರೇ ಇದೇ ಪತಿರಾನ ಐಪಿಎಲ್ನಲ್ಲಿ ಧೋನಿಯ ನಂಬಿಕಸ್ಥ ಬೌಲರ್ ಎನಿಸಿಕೊಂಡಿದ್ದರು. ಚೆನ್ನೈ ಬೌಲಿಂಗ್ ವಿಭಾಗದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿದ್ದ ಪತಿರಾನ ಆಡಿದ 12 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಪಡೆದರು.
ಹೇಳಲೇಬೇಕಾದ ಇನ್ನೊಂದು ಸಂಗತಿಯೆಂದರೆ ಇದೇ ಪತಿರಾನಗಾಗಿ ಧೋನಿ ಐಪಿಎಲ್ನಲ್ಲಿ ಬರೋಬ್ಬರಿ 4 ನಿಮಿಷಗಳ ಕಾಲ ಆಟ ನಿಲ್ಲುಂತೆ ಮಾಡಿದ್ದರು. ಇದು ಐಪಿಎಲ್ನಲ್ಲಿ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು. ಆದರೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿರುವ ಪತಿರಾನಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.
ಇನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 268 ರನ್ ಗಳಿಸಿತು. ತಂಡದ ಪರ ಚರಿತಾ ಅಸಲಂಕಾ ಗರಿಷ್ಠ 91 ರನ್ ಗಳಿಸಿದರು. ಇನ್ನು ಈ ಗುರಿ ಬೆನ್ನಟ್ಟಿದ ಅಫ್ಘಾನ್ ಪರ ಇಬ್ರಾಹಿಂ ಜದ್ರಾನ್ 98 ರನ್ ಮತ್ತು ರಹಮತ್ ಶಾ 55 ರನ್ ಬಾರಿಸಿ ಶ್ರೀಲಂಕಾ ನೀಡಿದ ಗುರಿಯನ್ನು ಅಫ್ಘಾನಿಸ್ತಾನ ಸುಲಭವಾಗಿ ಸಾಧಿಸುವಂತೆ ಮಾಡಿದರು.
Published On - 11:31 am, Sat, 3 June 23