
ಸೌತ್ ಆಫ್ರಿಕಾ (South Africa) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡ ಸೋಲನುಭವಿಸಿದೆ. ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್ಗಳು 44 ರನ್ಗಳಿಗೆ 2 ವಿಕೆಟ್ ಕಬಳಿಸಿದ್ದರು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಜೇಮಿ ಸ್ಮಿತ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಪರಿಣಾಮ ಇಂಗ್ಲೆಂಡ್ ಮೊದಲ 100 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿತು.

ಆದರೆ ಆ ಬಳಿಕ 31 ರನ್ಗಳಿಸುವಷ್ಟರಲ್ಲಿ ಇಂಗ್ಲೆಂಡ್ ತಂಡದ ಏಳು ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳಿಸುವಲ್ಲಿ ಸೌತ್ ಆಫ್ರಿಕಾ ಬೌಲರ್ಗಳು ಯಶಸ್ವಿಯಾದರು. ಪರಿಣಾಮ ಇಂಗ್ಲೆಂಡ್ 24.3 ಓವರ್ಗಳಲ್ಲಿ 131 ರನ್ಗಳಿಗೆ ಆಲೌಟ್ ಆಯಿತು. ಅಚ್ಚರಿ ಎಂದರೆ ಕಳೆದ 50 ವರ್ಷಗಳಲ್ಲಿ ಲೀಡ್ಸ್ನಲ್ಲಿ ಇಂಗ್ಲೆಂಡ್ ಕಲೆಹಾಕಿದ ಕನಿಷ್ಠ ಸ್ಕೋರ್.

ಅಂದರೆ 1975 ರಲ್ಲಿ ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 93 ರನ್ಗಳಿಗೆ ಆಲೌಟ್ ಆದ ಬಳಿಕ ಇಂಗ್ಲೆಂಡ್ ಈ ಪಿಚ್ನಲ್ಲಿ ಕಡಿಮೆ ಮೊತ್ತಕ್ಕೆ ಸರ್ವಪತನ ಕಂಡಿರಲಿಲ್ಲ. ಆದರೆ ಸೌತ್ ಆಫ್ರಿಕಾ ತಂಡವು ಆತಿಥೇಯರನ್ನು ಕೇವಲ 131 ರನ್ಗಳಿಗೆ ಆಲೌಟ್ ಮಾಡಿ 50 ವರ್ಷಗಳ ಬಳಿಕ ಹೀನಾಯ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹೀನಾಯ ಸೋಲಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವು 1-0 ಅಂತರದಿಂದ ಹಿನ್ನಡೆ ಅನುಭವಿಸಿದೆ. ಅಲ್ಲದೆ ಈ ಸರಣಿಯ ದ್ವಿತೀಯ ಪಂದ್ಯವು ಗುರುವಾರ ನಡೆಯಲಿದ್ದು, ಲಾರ್ಡ್ಸ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಇಂಗ್ಲೆಂಡ್ ತಂಡ ಸರಣಿ ಗೆಲುವಿನ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು.