Updated on: Sep 12, 2021 | 3:55 PM
ಶುಕ್ರವಾರ ವಿಶ್ವದೆಲ್ಲೆಡೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಇನ್ನು ದೇಶದ ಹಲವೆಡೆ ಗಣಪತಿ ಉತ್ಸವದ ಸಂಭ್ರಮ ಮುಂದುವರೆದಿದೆ. ಈ ಬಾರಿ ಕೊರೋನಾ ಕಾರಣದಿಂದ ಬಹುತೇಕರು ಸರಳವಾಗಿ ಹಬ್ಬ ಆಚರಿಸಿಕೊಂಡಿದ್ದರು.
ವಿಶ್ವದಾದ್ಯಂತ ಜನಪ್ರಿಯವಾಗಿರುವ ಗಣೇಶ ಚತುರ್ಥಿಯನ್ನು ಇತರೆ ಧರ್ಮದವರೂ ಆಚರಿಸಿಕೊಳ್ಳುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಈ ವೈರಲ್ ಪಟ್ಟಿಯಲ್ಲಿ ಈ ಬಾರಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್(AB de Villiers) ಕೂಡ ಇರೋದು ವಿಶೇಷ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಗಣಪತಿ ವಿಗ್ರಹವನ್ನು ಹಿಡಿದಿರುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ಹ್ಯಾಪಿ ಗಣೇಶ ಚತುರ್ಥಿ" ಎಂಬ ಶೀರ್ಷಿಕೆಯೊಂದಿಗೆ ಎಬಿಡಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಎಂದು ಫೋಟೋವನ್ನು ಹರಿಬಿಡಲಾಗಿದೆ.
ಆದರೆ ಈ ಫೋಟೋ ಅಸಲಿಯಲ್ಲ. ಬದಲಾಗಿ ಯಾರೋ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ ಎಂಬುದು ಫ್ಯಾಕ್ಟ್ ಚೆಕ್ನಿಂದ ತಿಳಿದು ಬಂದಿದೆ. ಅಂದರೆ ಟ್ರೋಫಿ ಹಿಡಿದಿದ್ದ ಭಾಗದಲ್ಲಿ ಗಣಪತಿ ವಿಗ್ರಹವನ್ನು ಎಡಿಟ್ ಮಾಡಲಾಗಿದ್ದು, ಆ ಮೂಲಕ ಹರಿಬಿಡಲಾಗಿದೆ. ಇತ್ತ ಫೋಟೋ ನೋಡಿ ನಿಜವೆಂದು ಭಾವಿಸಿದ ಬಹುತೇಕರು ಎಬಿ ಡಿವಿಲಿಯರ್ಸ್ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.
2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಲಂಡನ್ನಲ್ಲಿ ತೆಗೆದ ಫೋಟೋ ಇದಾಗಿದ್ದು, ಈ ಚಿತ್ರವನ್ನು ಐಸಿಸಿ ಜೂನ್ 3, 2017 ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಈಗ ಅದೇ ಫೋಟೋ ಬಳಸಿ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ. ಮೂಲ ಚಿತ್ರದಲ್ಲಿ ಎಬಿ ಡಿವಿಲಿಯರ್ಸ್ ಕೈಯಲ್ಲಿ ಗಣಪತಿ ವಿಗ್ರಹದ ಬದಲಿಗೆ ಟ್ರೋಫಿ ಇದ್ದು, ಅದನ್ನು ಎಡಿಟ್ ಮಾಡಿ ವೈರಲ್ ಮಾಡಿರುವುದು ಫ್ಯಾಕ್ಟ್ ಚೆಕ್ನಿಂದ ಬೆಳಕಿಗೆ ಬಂದಿದೆ.