ಗೌತಮ್ ಗಂಭೀರ್ ಮಾರ್ಮಿಕ ಉತ್ತರ: ರೋಹಿತ್ ಶರ್ಮಾಗೆ ಕಿಕ್ ಔಟ್ ಭೀತಿ
Australia vs India: 2024 ರಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 26 ಟೆಸ್ಟ್ ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 619 ರನ್ಗಳು ಮಾತ್ರ. ಅಂದರೆ 24.76ರ ಸರಾಸರಿಯಲ್ಲಿ ಮಾತ್ರ ಹಿಟ್ಮ್ಯಾನ್ ರನ್ಗಳಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಈವರೆಗೆ ಕಲೆಹಾಕಿರುವ ಒಟ್ಟು ರನ್ಗಳು ಕೇವಲ 31 ಮಾತ್ರ. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
1 / 6
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5ನೇ ಪಂದ್ಯವು ನಾಳೆಯಿಂದ (ಜ.3) ಶುರುವಾಗಲಿದೆ. ಸಿಡ್ನಿಯ ಎಸ್ಸಿಜಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯುವುದಿಲ್ಲವೇ? ಇಂತಹದೊಂದು ಪ್ರಶ್ನೆ ಮೂಡಲು ಮುಖ್ಯ ಕಾರಣ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನೀಡಿರುವ ಹೇಳಿಕೆ.
2 / 6
ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಗೌತಮ್ ಗಂಭಿರ್ಗೆ ನಾಳಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದ ಭಾಗವಾಗಲಿದ್ದಾರಾ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಗಂಭೀರ್ ನೀಡಿರುವ ಉತ್ತರ... ಪಿಚ್ ನೋಡಿದ ಬಳಿಕ ಪ್ಲೇಯಿಂಗ್ ಇಲೆವೆನ್ ರೂಪಿಸುತ್ತೇನೆ ಎಂದು.
3 / 6
ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ? ರೋಹಿತ್ ಶರ್ಮಾ ಕೊನೆಯ ಟೆಸ್ಟ್ ಪಂದ್ಯವನ್ನು ಆಡುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ನಾಳೆ ಪಿಚ್ ನೋಡಿದ ನಂತರ ನಾವು ಪ್ಲೇಯಿಂಗ್ ಇಲೆವೆನ್ ಅನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ. ಅಲ್ಲದೆ ಆಡುವ ಬಳಗವನ್ನು ಬಹಿರಂಗಪಡಿಸಲು ನಿರಾಕರಿಸಿದರು.
4 / 6
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಗೌತಮ್ ಗಂಭೀರ್ ನೇರವಾಗಿ ರೋಹಿತ್ ಶರ್ಮಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಬಹುದಿತ್ತು. ಅಥವಾ ನಾಯಕನಾಗಿರುವ ಕಾರಣ ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ಇರಲಿದ್ದಾರೆ ಎಂಬುದನ್ನು ಸಹ ಖಚಿತಪಡಿಸಬಹುದಿತ್ತು. ಆದರೆ ಇವರೆಡನ್ನೂ ಗಂಭೀರ್ ಹೇಳಿಲ್ಲ ಎಂಬುದು ಅಚ್ಚರಿ. ಹೀಗಾಗಿಯೇ ಇದೀಗ ಸಿಡ್ನಿ ಟೆಸ್ಟ್ನಿಂದ ರೋಹಿತ್ ಶರ್ಮಾ ಹೊರಬೀಳಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
5 / 6
ಒಟ್ಟಿನಲ್ಲಿ ಕಳಪೆ ಫಾರ್ಮ್ನಲ್ಲಿರುವ ರೋಹಿತ್ ಶರ್ಮಾ ಅವರನ್ನು ಸಿಡ್ನಿ ಟೆಸ್ಟ್ ಪಂದ್ಯದಿಂದ ಕೈ ಬಿಟ್ಟು, ಜಸ್ಪ್ರೀತ್ ಬುಮ್ರಾಗೆ ಮತ್ತೆ ನಾಯಕತ್ವ ನೀಡಲಿದ್ದಾರಾ ಎಂಬುದೇ ಈಗ ಕುತೂಹಲ. ಏಕೆಂದರೆ ಈ ಬಾರಿಯ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಬುಮ್ರಾ ಮುನ್ನಡೆಸಿದ್ದರು. ಅಲ್ಲದೆ ಆ ಪಂದ್ಯದಲ್ಲಿ ಭಾರತ ತಂಡ 295 ರನ್ಗಳ ಅಮೋಘ ಜಯ ಸಾಧಿಸಿತ್ತು.
6 / 6
ಇದಾದ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನು ಮಳೆಯ ಕಾರಣ ಒಂದು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಕೊನೆಯ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಸರಣಿ ನಿರ್ಣಾಯಕ. ಈ ಮ್ಯಾಚ್ನಲ್ಲಿ ಗೆದ್ದರೆ ಭಾರತ ತಂಡವು ಸರಣಿ ಸೋಲನ್ನು ತಪ್ಪಿಸಿಕೊಳ್ಳಬಹುದು. ಹೀಗಾಗಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ರೋಹಿತ್ ಶರ್ಮಾ ಅವರನ್ನು ಕೈ ಬಿಟ್ಟು ಮತ್ತೆ ಜಸ್ಪ್ರೀತ್ ಬುಮ್ರಾಗೆ ಕ್ಯಾಪ್ಟನ್ಸಿ ನೀಡುತ್ತಾರಾ ಎಂಬುದೇ ಈಗ ಕುತೂಹಲ.
Published On - 10:53 am, Thu, 2 January 25