
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೋಮವಾರ ನಡೆದ ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ ಅನೇಕ ಕಾರಣಗಳಿಂದ ಭಾರೀ ಸುದ್ದಿ ಆಗುತ್ತಿದೆ. ಈ ಪಂದ್ಯದಲ್ಲಿ ಆರ್ಸಿಬಿ 18 ರನ್ಗಳ ಭರ್ಜರಿ ಜಯ ಸಾಧಿಸಿದ ಬಳಿಕ ಆಟಗಾರರು ನಿಯಮ ಉಲ್ಲಂಘಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ತಿಳಿಸಿಗೊಳಿಸಿದರು.

ಇದು ಒಂದುಕಡೆಯಾದರೆ ಪಂದ್ಯದ ಮಧ್ಯೆ ಕೊಹ್ಲಿ ಅವರು ಎಲ್ಎಸ್ಜಿ ಆಟಗಾರ ನವೀನ್ ಉಲ್ ಹಖ್ ಜೊತೆಗೂ ಜಗಳಿಕ್ಕಿಳಿದಿದ್ದಾರೆ. ಲಖನೌ ಬ್ಯಾಟಿಂಗ್ ಇನ್ನಿಂಗ್ಸ್ನ 17ನೇ ಓವರ್ನಲ್ಲಿ ನವೀನ್ ಹಾಗೂ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ. ಇಲ್ಲಿ ಅಂಪೈರ್ ಹಾಗೂ ಅಮಿತ್ ಮಿಶ್ರಾ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.

ಜಗಳವಾಡಿದ ಜೊತೆಗೆ ಇಡೀ ಪಂದ್ಯದಲ್ಲಿ ಆಕ್ರೋಶದಿಂದ ಕೂಡಿದ್ದ ವಿರಾಟ್ ಕೊಹ್ಲಿ ಮೇಲೆ ಹಾಗೂ ಪಂದ್ಯದ ಬಳಿಕ ಜಗಳವಾಡಿದ ಗೌತಮ್ ಗಂಭೀರ್ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಠಿಣ ಕ್ರಮಕೈಗೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಲಖನೌ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಲಖನೌ ಸೂಪರ್ ಜೈಂಟ್ಸ್ ಬೌಲರ್ ನವೀನ್-ಉಲ್-ಹಕ್ ಅವರಿಗೆ ದಂಡ ವಿಧಿಸಲಾಗಿದೆ.

ಅಚ್ಚರಿ ಎಂದರೆ ಕೊಹ್ಲಿ ಹಾಗೂ ಗಂಭೀರ್ಗೆ ಇಡೀ ಪಂದ್ಯದ ಶುಲ್ಕವನ್ನು ಕಡಿತ ಮಾಡಲಾಗಿದೆ. ನವೀನ್ ಅವರಿಗೆ ಪಂದ್ಯದ ಶೇ. 50 ರಷ್ಟು ಶುಲ್ಕವನ್ನು ಕಡಿತಗೊಳಿಸಲಾಗಿದೆ. ಗಂಭೀರ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ಹಂತ 2 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರ ಪಂದ್ಯದ ಶುಲ್ಕದ 100 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿದೆ.

ಅಂತೆಯೇ, ಕೊಹ್ಲಿ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ಹಂತ 2 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರ ಪಂದ್ಯದ ಶುಲ್ಕದ 100 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ಮತ್ತೊಂದೆಡೆ, ನವೀನ್-ಉಲ್-ಹಕ್ ಅವರ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.