ಐಪಿಎಲ್ 2023 ರಲ್ಲಿ ಹೈ-ಸ್ಕೋರ್ ಗೇಮ್ ಮಾತ್ರವಲ್ಲದೆ ಲೋ-ಸ್ಕೋರ್ ಪಂದ್ಯ ಕೂಡ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಇದಕ್ಕೆ ಸಾಕ್ಷಿ ಸೋಮವಾರ ಲಖನೌದ ಏಕಾನ ಸ್ಟೇಡಿಯಂನಲ್ಲಿ ನಡೆದ ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ.
ಸಾಕಷ್ಟು ಕುತೂಹಲಕಾರಿ ಘಟನೆಗೆ ಕಾರಣವಾದ ಈ ಪಂದ್ಯದಲ್ಲಿ ಆರ್ಸಿಬಿ 20 ಓವರ್ಗೆ 126 ರನ್ ಗಳಿಸಿತು. ಆದರೆ, ಸುಲಭ ಟಾರ್ಗೆಟ್ ಬೆನ್ನಟ್ಟಲಾಗದೆ ಎಲ್ಎಸ್ಜಿ 108 ರನ್ಗೆ ಸರ್ವಪತನನ ಕಂಡಿತು. ಈ ಪಂದ್ಯದ ಪ್ರಮುಖ ಹೈಲೇಟ್ ಪಂದ್ಯ ಮುಗಿದ ಬಳಿಕ ನಡೆದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳ.
ಆದರೆ, ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಈ ವಿಚಾರದ ಕುರಿತು ಯಾವುದೇ ಮಾತುಗಳನ್ನು ಆಡಲಿಲ್ಲ. ಪಂದ್ಯದಲ್ಲಿ ಆಟಗಾರರು ನೀಡಿದ ಪ್ರದರ್ಶನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಚಿನ್ನಸ್ವಾಮಿಗೆ ಹೋಲಿಸಿದರೆ ಇಲ್ಲಿನ ಪಿಚ್ ಸಂಪೂರ್ಣ ವಿರುದ್ಧವಾಗಿದೆ. ಇಂತಹ ಕಠಿಣ ಪಿಚ್ನಲ್ಲಿ ಮೊದಲು ಆರು ಓವರ್ಗಳಲ್ಲಿ ನಾವು ಅತ್ಯುತ್ತಮ ಬ್ಯಾಟಿಂಗ್ ಮಾಡಿದೆವು. ನಾವು ಅದೇ ರೀತಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದೆವು. ಮೊದಲ 6 ಓವರ್ಗಳಲ್ಲಿ ಅರ್ಧಶತಕದ ಜೊತೆಯಾಟ ಆಡಿದ್ದು ಸಹಕಾರಿ ಆಯಿತು ಎಂದು ಡುಪ್ಲೆಸಿಸ್ ಹೇಳಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡುವುದು ಪ್ರಮುಖವಾಗಿತ್ತು. ನಮ್ಮ ಸ್ಪಿನ್ನರ್ಗಳು ಇಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ. ಮಹಿಪಾಲ್ ಕೂಡ ಲಯ ಕಂಡುಕೊಂಡರು. ಸರಿಯಾದ ಜಾಗದಲ್ಲಿ ಚೆಂಡನ್ನು ಎಸೆದರೆ ರನ್ ಗಳಿಸುವುದು ತುಂಬಾ ಕಷ್ಟ. 135 ರನ್ ನಮ್ಮ ಯೋಜನೆ ಆಗಿತ್ತು. ಅದರಂತೆ ಆಯಿತು - ಫಾಫ್ ಡುಪ್ಲೆಸಿಸ್.
ಫೀಲ್ಡ್ಗೆ ಬರುವ ಮುನ್ನ ಬೌಲರ್ಗಳ ಜೊತೆ ಒಂದಿಷ್ಟು ಮಾತುಕತೆ ನಡೆಸಿದೆವು. ನಾವು ಕಲೆಹಾಕಿರುವುದು ಮ್ಯಾಚ್ ವಿನ್ನಿಂಗ್ ರನ್. ಪವರ್ ಪ್ಲೇನಲ್ಲಿ 2-3 ವಿಕೆಟ್ ಪಡೆದುಕೊಳ್ಳಬೇಕು. ಕೆಎಲ್ ರಾಹುಲ್ ಇಲ್ಲದ ಕಾರಣ ವಿಕೆಟ್ ಪಡೆದುಕೊಂಡರೆ ಪಂದ್ಯ ಮತ್ತಷ್ಟು ಕಠಿಣವಾಗುತ್ತದೆ ಎಂದು ಹೇಳಿದ್ದೆ ಎಂಬುದು ಫಾಫ್ ಮಾತು.
ಕರ್ಣ್ ಶರ್ಮಾ ನೀಡಿದ ಪ್ರದರ್ಶನ ಖುಷಿ ತಂದಿದೆ. ಅವರು ಸಾಕಷ್ಟು ಶ್ರಮ ವಹಿಸುತ್ತಾರೆ ಆದರೆ, ಮನ್ನಣೆ ಸಿಗುವುದಿಲ್ಲ. ಹ್ಯಾಜುಲ್ವುಡ್ ಕಮ್ಬ್ಯಾಕ್ ಮಾಡಿದ್ದು ಬಲ ಬಂದಂತಾಗಿದೆ. ಈ ಗೆಲುವು ಸಂತಸ ತಂದಿದೆ ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಡುಪ್ಲೆಸಿಸ್ ಅವರ 44 ರನ್ ಹಾಗೂ ವಿರಾಟ್ ಕೊಹ್ಲಿಯ 31 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಎಲ್ಎಸ್ಜಿ ಕೂಡ ಬ್ಯಾಟಿಂಗ್ ಮಾಡಲು ಪರದಾಡಿತು. ತಂಡದ ಪರ ಕೃಷ್ಣಪ್ಪ ಗೌತಮ್ (23) ಗರಿಷ್ಠ ರನ್ ಕಲೆಹಾಕಿದರು. ಲಖನೌ 19.5 ಓವರ್ಗಳಲ್ಲಿ 108 ರನ್ಗೆ ಆಲೌಟ್ ಆಯಿತು.
Published On - 10:15 am, Tue, 2 May 23