Glenn Maxwell: ಮ್ಯಾಕ್ಸ್ವೆಲ್ ಸಿಡಿಲಬ್ಬರಕ್ಕೆ ಹಿಟ್ಮ್ಯಾನ್ ದಾಖಲೆ ಉಡೀಸ್
TV9 Web | Updated By: ಝಾಹಿರ್ ಯೂಸುಫ್
Updated on:
Feb 12, 2024 | 6:59 AM
Glenn Maxwell Record: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಸ್ಪೋಟಕ ಸೆಂಚುರಿ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ವಿಶ್ವ ದಾಖಲೆವೊಂದನ್ನು ಮುರಿದಿದ್ದಾರೆ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
1 / 7
ಅಡಿಲೇಡ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ 5 ಶತಕಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಮುರಿದಿದ್ದಾರೆ.
2 / 7
ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್ವೆಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಮ್ಯಾಕ್ಸಿ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
3 / 7
ಇದಾದ ಬಳಿಕ ಸಿಡಿಲಬ್ಬರ ಶುರು ಮಾಡಿದ ಮ್ಯಾಕ್ಸ್ವೆಲ್ ಕೇವಲ 50 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 5 ಶತಕಗಳನ್ನು ಬಾರಿಸಿರುವ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದರು.
4 / 7
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 5 ಶತಕ ಸಿಡಿಸಿದ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಚುಟುಕು ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ ಐದು ಶತಕಗಳನ್ನು ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು.
5 / 7
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 143 ಟಿ20 ಇನಿಂಗ್ಸ್ಗಳಲ್ಲಿ 5 ಶತಕಗಳ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ಗ್ಲೆನ್ ಮ್ಯಾಕ್ಸ್ವೆಲ್ ಅಳಿಸಿ ಹಾಕಿದ್ದಾರೆ.
6 / 7
ಮ್ಯಾಕ್ಸ್ವೆಲ್ ಕೇವಲ 94 ಟಿ20 ಇನಿಂಗ್ಸ್ಗಳಲ್ಲಿ 5 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 100 ಕ್ಕಿಂತ ಕಡಿಮೆ ಇನಿಂಗ್ಸ್ಗಳಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಗ್ಲೆನ್ ಮ್ಯಾಕ್ಸ್ವೆಲ್ ತಮ್ಮದಾಗಿಸಿಕೊಂಡಿದ್ದಾರೆ.
7 / 7
ಇನ್ನು ಈ ಪಂದ್ಯದಲ್ಲಿ 55 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್ವೆಲ್ 8 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ ಅಜೇಯ 120 ರನ್ ಬಾರಿಸಿದರು. ಈ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಪೇರಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 207 ರನ್ಗಳಿಸಿ 34 ರನ್ಗಳಿಂದ ಸೋಲೊಪ್ಪಿಕೊಂಡಿದೆ.