
ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್, ಮಾಜಿ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಅವರಿಗೆ ಇಂದು (ಅ. 17) 53ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ಮಾಜಿ ಸಹ-ಆಟಗಾರರು, ಹಾಲಿ ಕ್ರಿಕೆಟಿಗರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಅಕ್ಟೋಬರ್ 17, 1970 ರಂದು ಜನಿಸಿದ ಕುಂಬ್ಳೆ ಅವರನ್ನು ಎಲ್ಲರು ಪ್ರೀತಿಯಿಂದ ಜಂಬೋ ಎಂದು ಕರೆಯುತ್ತಾರೆ.

ಎಪ್ರಿಲ್ 25, 1990 ರಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಕುಂಬ್ಳೆ ಸುಮಾರು 18 ವರ್ಷಗಳ ಕಾಲ ಟೀಮ್ ಇಂಡಿಯಾಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕುಂಬ್ಳೆ ಭಾರತ ತಂಡದ ಪರ 132 ಟೆಸ್ಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 619 ಮತ್ತು 337 ವಿಕೆಟ್ ಕಬಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 900ಕ್ಕೂ ಅಧಿಕ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎಂಬ ಹೆಗ್ಗಳಿಕೆ ಅವರದಾಗಿದೆ. ಕುಂಬ್ಳೆ ಫೆ. 7, 1999 ರಂದು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 26.3 ಓವರ್ ಬೌಲಿಂಗ್ ಮಾಡಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅಲ್ಲದೆ ಭಾರತ 212 ರನ್ಗಳ ಬೃಹತ್ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕುಂಬ್ಳೆ ಅವರು ತಂಡದಿಂದ ಹೊರ ಬಂದ ನಂತರ ದೇಸಿ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆದರು. ರೆಸ್ಟ್ ಆಫ್ ಇಂಡಿಯಾ ವಿರುದ್ಧ 13/138 ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದರು. ಅಲ್ಲಿಂದ ಮುಂದೆ ಹಿಂತಿರುಗಿ ನೋಡಲೇ ಇಲ್ಲ. 18 ವರ್ಷಗಳ ಕಾಲ ವೃತ್ತಿ ಬದುಕು ಕಂಡುಕೊಂಡರು.

ಸಭ್ಯರ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್ ನಲ್ಲಿ ಉತ್ತಮ ಪ್ರತಿಭೆ ಜತೆಗೆ ವಿದ್ಯೆಯ ಬಲ ಇರುವವರು ತೀರಾ ಕಡಿಮೆ. ಆದರೆ, ಕುಂಬ್ಳೆ ಅವರು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದುಕೊಂಡಿದ್ದಾರೆ. ಛಾಯಾಗ್ರಹಣ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.

ಈ ಸ್ಪಿನ್ ಲೋಕದ ಮಾಂತ್ರಿಕನಿಗೆ ‘ಜಂಬೋ’ (Jumbo) ಎಂಬ ಅಡ್ಡ ಹೆಸರು ಕೂಡ ಇದೆ. ಅಷ್ಟಕ್ಕೂ ಕುಂಬ್ಳೆಗೆ ಜಂಬೋ ಎಂದು ಹೆಸರಿಟ್ಟವರು ನವಜೋತ್ ಸಿಂಗ್ ಸಿಧು. ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಇರಾನಿ ಟ್ರೋಫಿಯಲ್ಲಿ ಸಿಧು ಇವರಿಗೆ ಈ ಅಡ್ಡ ಹೆಸರನ್ನಿಟ್ಟರಂತೆ.

''ನಾನು ರೆಸ್ಟ್ ಆಫ್ ಇಂಡಿಯಾ ಪರ ಆಡುತ್ತಿದ್ದೆ. ಸಿಧು ಕೂಡ ಈ ತಂಡದಲ್ಲಿ ಆಡುತ್ತಿದ್ದರು. ತಂಡದ ಪರ ನಾನು ಬೌಲಿಂಗ್ ಮಾಡುವ ವೇಳೆ ಸಿಧು, ಮಿಡ್ ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ನಾನು ಎಸೆದ ಒಂದು ಚೆಂಡು ತುಂಬಾ ಬೌನ್ಸ್ ಆಯಿತು. ಈ ಎಸೆತವನ್ನು ಕಂಡ ಸಿಧು, ‘ಜಂಬೋ ಜೆಟ್’ ಎಂದು ಕರೆದರು. ಅದರ ನಂತರ ‘ಜೆಟ್’ ಪದವನ್ನು ಕೈಬಿಟ್ಟು, ನನ್ನ ತಂಡದ ಸದಸ್ಯರು ನನ್ನನ್ನು ಜಂಬೋ ಎಂದು ಕರೆಯಲು ಪ್ರಾರಂಭಿಸಿದರು,'' ಎಂಬ ಸ್ವತಃ ಕುಂಬ್ಳೆ ಹೇಳಿದ್ದಾರೆ.