
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಮಾಡಿದ ನಂತರ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸೂಚನೆ ಅನೇಕ ಸಲ ಕಂಡುಬಂದಿದೆ. ಭಾನುವಾರ ರಾತ್ರಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲೂ ಇದು ಎದ್ದು ಕಂಡಿತು.

ಜಿಟಿ ಮತ್ತು ಎಂಐ ನಡುವಿನ ಐಪಿಎಲ್ 2024 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಹೈಲೇಟ್ ಆಗಿದ್ದರು. ಅದರಲ್ಲೂ ಹಾರ್ದಿಕ್ ಅವರು ರೋಹಿತ್ ಬಳಿ ಬೌಂಡರಿ ಲೈನ್ ಹತ್ತಿರ ಫೀಲ್ಡಿಂಗ್ ಮಾಡು ಎಂದು ಹೇಳಿದ್ದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೆ, ಪಂದ್ಯ ಮುಗಿದ ಬಳಿಕ ರೋಹಿತ್ ಅವರು ಹಾರ್ದಿಕ್ ಬಳಿಕ ಕೋಪದಿಂದ ಮಾತನಾಡುತ್ತಿರುವುದು ಕಂಡುಬಂತು.

ಆದರೆ, ಈ ಎಲ್ಲ ಗೊಂದಲಗಳ ನಡುವೆ ಮುಂಬೈ ಇಂಡಿಯನ್ಸ್ ಆಟಗಾರರು ಸೋಮವಾರ ಭರ್ಜರಿ ಆಗಿ ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಇದರಲ್ಲಿ ಮಂಬೈ ಆಟಗಾರರ ಕುಟುಂಬದವರು ಕೂಡ ಭಾಗಿಯಾಗಿದ್ದರು. ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೆ ಕೂಡ ಕಂಡುಬಂದರು. ಇದೀಗ ಒಂದು ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.

ರೋಹಿತ್ ಶರ್ಮಾ ಪತ್ನಿ ಮತ್ತು ಅವರ ಮಗಳು ಹೋಳಿ ಆಡುತ್ತಿರುವಾಗ ಹಾರ್ದಿಕ್ ಪಾಂಡ್ಯ ಅಲ್ಲಿಗೆ ಬಂದು ರಿತಿಕಾ ಅವರಿಗೆ ಹಗ್ ಕೊಟ್ಟಿದ್ದಾರೆ. ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೆ ಹಾರ್ದಿಕ್-ರೋಹಿತ್ ಜೊತೆಯಾಗಿ ಹೋಳಿ ಆಡಿದ್ದಾರೆ. ಇದನ್ನು ಕಂಡು ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ಮೂಲಕ ಇವರಿಬ್ಬರ ನಡುವೆ ಯಾವುದೇ ಜಗಳ ಇಲ್ಲ ಎಂಬುದು ಸಾಭೀತಾಗಿದೆ.

ಮುಂಬೈ ಇಂಡಿಯನ್ಸ್ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಹಂಚಿಕೊಂಡ ವಿಡಿಯೋದಲ್ಲಿ, ಮುಂಬೈ ಆಟಗಾರರು, ಅವರ ಕುಟುಂಬ ಮತ್ತು ಸಹಾಯಕ ಸಿಬ್ಬಂದಿಯ ಸದಸ್ಯರೊಂದಿಗೆ ಬಣ್ಣಗಳ ಹಬ್ಬವನ್ನು ಆಚರಿಸಿದ್ದಾರೆ. ಇದರಲ್ಲಿ ರೋಹಿತ್ ಮತ್ತು ಹಾರ್ದಿಕ್ ಒಟ್ಟಿಗೆ ಹೋಳಿ ಆನಂದಿಸುತ್ತಿರುವುದನ್ನು ಕಾಣಬಹುದು. ರೋಹಿತ್ ತಮ್ಮ ಪತ್ನಿ ರಿತಿಕಾ, ಮಗಳು ಸಮೈರಾ ಮತ್ತು ಇತರ ಆಟಗಾರರೊಂದಿಗೆ ಹೋಳಿ ಆನಂದಿಸುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಐಪಿಎಲ್ 2024 ರ ಋತುವಿನ ತನ್ನ ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 2016 ರ ವಿಜೇತ ಸನ್ ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ. ಬುಧವಾರ (ಮಾರ್ಚ್ 27) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.