Harry Brook: ಸ್ಪೋಟಕ ತ್ರಿಶತಕ ಸಿಡಿಸಿದ ಹ್ಯಾರಿ ಬ್ರೂಕ್
Harry Brook: PAK vs ENG: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 556 ರನ್ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಬ್ಯಾಟ್ ಬೀಸಿರುವ ಇಂಗ್ಲೆಂಡ್ ಪರ ಜೋ ರೂಟ್ (262) ದ್ವಿಶತಕ ಬಾರಿಸಿದರೆ, ಹ್ಯಾರಿ ಬ್ರೂಕ್ ತ್ರಿಶತಕ ಸಿಡಿಸಿ ಮಿಂಚಿದ್ದಾರೆ.
1 / 6
ಇಂಗ್ಲೆಂಡ್ ತಂಡದ ಯುವ ದಾಂಡಿಗ ಹ್ಯಾರಿ ಬ್ರೂಕ್ (Harry Brook) ಸ್ಪೋಟಕ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. ಮುಲ್ತಾನ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೂಕ್ 310 ಎಸೆತಗಳಲ್ಲಿ ತ್ರಿಪಲ್ ಸೆಂಚುರಿ ಪೂರೈಸಿದರು. ಈ ಮೂಲಕ ಇಂಗ್ಲೆಂಡ್ ಪರ ಅತೀ ವೇಗದ ತ್ರಿಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡರು.
2 / 6
ವಿಶೇಷ ಎಂದರೆ ಇದು ಟೆಸ್ಟ್ ಕ್ರಿಕೆಟ್ನಲ್ಲಿ 5 ವರ್ಷಗಳ ಬಳಿಕ ಮೂಡಿಬಂದ ಮೊದಲ ತ್ರಿಶತಕವಾಗಿದೆ. ಇದಕ್ಕೂ ಮುನ್ನ 2019 ರಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (335) ಪಾಕಿಸ್ತಾನ್ ವಿರುದ್ಧ ತ್ರಿಪಲ್ ಸೆಂಚುರಿ ಸಿಡಿಸಿದ್ದರು. ಇದೀಗ ಬರೋಬ್ಬರಿ 5 ವರ್ಷಗಳ ಬಳಿಕ ಬ್ಯಾಟರ್ರೊಬ್ಬರು 300 ರನ್ಗಳ ಗಡಿದಾಟಿದ್ದಾರೆ.
3 / 6
ಹಾಗೆಯೇ 34 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಬ್ಯಾಟರ್ರೊಬ್ಬರು 300 ರನ್ಗಳಿಸಿದ್ದಾರೆ. 1990 ರಲ್ಲಿ ಗ್ರಾಹಂ ಗೂಚ್ (333 ರನ್ಗಳು) ಇಂಗ್ಲೆಂಡ್ ಪರ ಕೊನೆಯ ಬಾರಿ ತ್ರಿಪಲ್ ಸೆಂಚುರಿ ಬಾರಿಸಿದ್ದರು. ಇದೀಗ 3 ದಶಕಗಳ ಬಳಿಕ ಹ್ಯಾರಿ ಬ್ರೂಕ್ ಮೂರಂಕಿ ಮೊತ್ತಗಳಿಸಿ ಬ್ಯಾಟ್ ಮೇಲೆಕ್ಕೆತ್ತಿದ್ದಾರೆ.
4 / 6
ಇನ್ನು ಪಾಕಿಸ್ತಾನ್ ವಿರುದ್ಧ ತ್ರಿಶತಕ ಬಾರಿಸಿದ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಹ್ಯಾರಿ ಬ್ರೂಕ್ ಪಾತ್ರರಾಗಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಇಂಗ್ಲೆಂಡ್ನ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬ್ರೂಕ್ಗೂ ಮುನ್ನ ಗ್ಯಾರಿ ಸೋಬರ್ಸ್ (1958), ಡೇವಿಡ್ ವಾರ್ನರ್ (2019), ಮಾರ್ಕ್ ಟೇಲರ್ (1998) ಹಾಗೂ ವೀರೇಂದ್ರ ಸೆಹ್ವಾಗ್ (2004) ಮಾತ್ರ ಪಾಕ್ ವಿರುದ್ಧ ತ್ರಿಶತಕ ಬಾರಿಸಿದ್ದರು.
5 / 6
ಇದರ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ತ್ರಿಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ದಾಖಲೆಯನ್ನೂ ಸಹ ಬ್ರೂಕ್ ಮುಡಿಗೇರಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವೀರೇಂದ್ರ ಸೆಹ್ವಾಗ್. 2008 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೆಹ್ವಾಗ್ ಕೇವಲ 278 ಎಸೆತಗಳಲ್ಲಿ ತ್ರಿಪಲ್ ಸೆಂಚುರಿ ಸಿಡಿಸಿದ್ದರು. ಇದೀಗ 310 ಎಸೆತಗಳೊಂದಿಗೆ ಹ್ಯಾರಿ ಬ್ರೂಕ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
6 / 6
ಇನ್ನು ಈ ಪಂದ್ಯದಲ್ಲಿ 322 ಎಸೆತಗಳನ್ನು ಎದುರಿಸಿದ ಹ್ಯಾರಿ ಬ್ರೂಕ್ 3 ಸಿಕ್ಸ್ ಹಾಗೂ 29 ಫೋರ್ಗಳೊಂದಿಗೆ 317 ರನ್ ಬಾರಿಸಿದರು. ಹಾಗೆಯೇ ಜೋ ರೂಟ್ 262 ರನ್ ಕಲೆಹಾಕಿದರು. ಈ ತ್ರಿಶತಕ ಹಾಗೂ ದ್ವಿಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು 7 ವಿಕೆಟ್ ನಷ್ಟಕ್ಕೆ 823 ರನ್ಗಳಿಸಿ ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 267 ರನ್ಗಳ ಮುನ್ನಡೆ ಪಡೆದುಕೊಂಡಿದೆ.
Published On - 2:05 pm, Thu, 10 October 24