Updated on: Sep 18, 2022 | 4:55 PM
ಸೆಪ್ಟೆಂಬರ್ 20 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗಲಿದೆ. 3 ಪಂದ್ಯಗಳ ಈ ಸರಣಿಯು ಉಭಯ ತಂಡಗಳಿಗೂ ಬಹಳ ಮಹತ್ವದ ಸರಣಿಯಾಗಿದೆ. ಏಕೆಂದರೆ ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ಶುರುವಾಗಲಿದ್ದು, ಅದಕ್ಕೂ ಮುನ್ನ ಎರಡು ಬಲಿಷ್ಠ ತಂಡಗಳಿಗೂ ಪೂರ್ವಭಾವಿ ಅಭ್ಯಾಸದಂತಿದೆ ಈ ಸರಣಿ.
ಹೀಗಾಗಿ ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸುವ ಇರಾದೆಯಲ್ಲಿದೆ ಉಭಯ ತಂಡಗಳು. ಇತ್ತ ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ಉಭಯ ತಂಡಗಳ ಮುಖಾಮುಖಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಎರಡೂ ತಂಡಗಳ ಆಟಗಾರರಿದ್ದಾರೆ. ಹಾಗಿದ್ರೆ ಭಾರತ-ಆಸೀಸ್ ಮುಖಾಮುಖಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್ಮನ್ಗಳು ಯಾರೆಲ್ಲಾ ನೋಡೋಣ...
ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 18 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 7 ಅರ್ಧಶತಕದೊಂದಿಗೆ ಒಟ್ಟು 718 ರನ್ ಕಲೆಹಾಕಿ, ಇಂಡೋ-ಆಸೀಸ್ ಮುಖಾಮುಖಿಯಲ್ಲಿ ರನ್ ಸರದಾರ ಎನಿಸಿಕೊಂಡಿದ್ದಾರೆ.
ಆರೋನ್ ಫಿಂಚ್: ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಕೂಡ ಟೀಮ್ ಇಂಡಿಯಾ ವಿರುದ್ಧ ರನ್ಗಳಿಕೆಯ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಭಾರತದ ವಿರುದ್ಧ ಇದುವರೆಗೆ 15 ಟಿ20 ಇನಿಂಗ್ಸ್ ಆಡಿರುವ ಫಿಂಚ್ ಒಟ್ಟು 440 ರನ್ ಕಲೆಹಾಕಿದ್ದಾರೆ.
ಗ್ಲೆನ್ ಮ್ಯಾಕ್ಸ್ವೆಲ್: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಟೀಮ್ ಇಂಡಿಯಾ ವಿರುದ್ಧ 15 ಟಿ20 ಇನಿಂಗ್ಸ್ಗಳಲ್ಲಿ ಒಟ್ಟು 431 ರನ್ ಬಾರಿಸಿದ್ದಾರೆ.
ಶಿಖರ್ ಧವನ್: ಈ ಪಟ್ಟಿಯಲ್ಲಿ ನಾಲ್ಕನೇ ಆಟಗಾರ ಶಿಖರ್ ಧವನ್. ಆಸ್ಟ್ರೇಲಿಯಾ ವಿರುದ್ಧ 13 ಟಿ20 ಇನಿಂಗ್ಸ್ ಆಡಿರುವ ಧವನ್ 347 ರನ್ ಬಾರಿಸಿದ್ದಾರೆ. ಆದರೆ ಈ ಬಾರಿ ಶಿಖರ್ ಧವನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ.
ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಹಿಟ್ಮ್ಯಾನ್ ಆಸ್ಟ್ರೇಲಿಯಾ ವಿರುದ್ಧ 16 ಟಿ20 ಇನಿಂಗ್ಸ್ ಆಡಿದ್ದು, ಈ ವೇಳೆ 318 ರನ್ ಕಲೆಹಾಕಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ.