
2021 ರಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದ ಬಳಿಕ, ಕಿಂಗ್ ಕೊಹ್ಲಿಯನ್ನು ಉದ್ದೇಶ ಪೂರ್ವಕವಾಗಿಯೇ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಎಂಬುದಾಗಿ ಹುಟ್ಟಿಕೊಂಡ ವಿವಾದಕ್ಕೆ ಇನ್ನು ಕೊನೆ ಸಿಕ್ಕಿಲ್ಲ.

ಈ ವಿಚಾರದ ಬಗ್ಗೆ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿಯನ್ನು ಇಂದಿಗೂ ದೋಷಿಯನ್ನಾಗಿ ಮಾಡಲಾಗುತ್ತಿದೆ. ಗಂಗೂಲಿ ಅವರ ಕುತಂತ್ರದಿಂದ ಕೊಹ್ಲಿಯನ್ನು ಬಲವಂತವಾಗಿ ನಾಯಕತ್ವದಿಂದ ತೆಗೆದುಹಾಕಲಾಯಿತು ಎಂಬ ವದಂತಿ ಈಗಲೂ ಹರಿದಾಡುತ್ತಿದೆ.

ಈ ಬಗ್ಗೆ ಸೌರವ್ ಗಂಗೂಲಿ ಕೂಡ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದಾರೆ. ಆದರೂ ಈ ವಿವಾದ ಶಮನವಾಗಿಲ್ಲ. ಆದರೀಗ ಅಂದು ಗಂಗೂಲಿ ಅವರ ನಿಲುವೆನಾಗಿತ್ತು? ಕೊಹ್ಲಿ ತೆಗೆದುಕೊಂಡ ನಿರ್ಧಾರ ಏನಾಗಿತ್ತು? ಎಂಬುದರ ಬಗ್ಗೆ ಗಂಗೂಲಿ ಮುಕ್ತವಾಗಿ ಮಾತನಾಡಿದ್ದಾರೆ.

ವಾಸ್ತವವಾಗಿ ಈಗ ಹರಡಿರುವ ವಂದತಿಯ ಪ್ರಕಾರ, ವಿರಾಟ್ ಕೊಹ್ಲಿಗೆ ಟಿ20 ತಂಡದ ನಾಯಕತ್ವವನ್ನು ಬಿಟ್ಟುಕೊಡಲು ಇಷ್ಟವಿರಲಿಲ್ಲ. ಆದರೆ ಅವರಿಂದ ಟಿ20 ನಾಯಕತ್ವವನ್ನು ಕಸಿದುಕೊಳ್ಳಲಾಯಿತು. ಈ ಬೆಸರದಿಂದ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯ ನಾಯಕತ್ವವನ್ನೂ ತ್ಯಜಿಸಿದರು ಎಂಬುದಾಗಿದೆ.

ಇದೀಗ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ 2 ವರ್ಷಗಳ ನಂತರ ಮತ್ತೊಮ್ಮೆ ಈ ವಿಚಾರ ಮುನ್ನಲೆಗೆ ಬಂದಿದ್ದು, ಈ ಕುರಿತು ಹೇಳಿಕೆ ನೀಡಿರುವ ಸೌರಭ್ ಗಂಗೂಲಿ, ‘ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವಲ್ಲಿ ಸೌರವ್ ಗಂಗೂಲಿ ಪಾತ್ರವಿದೆ ಎಂಬುದು ಕೊಹ್ಲಿ ಅಭಿಮಾನಿಗಳ ಅಭಿಪ್ರಾಯವಾಗಿದೆ. ಆದರೆ ಈ ವಿಚಾರದಲ್ಲಿ ನನ್ನ ಪಾತ್ರ ಏನು ಇಲ್ಲ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಗಂಗೂಲಿ, ‘ ಸ್ವತಃ ಕೊಹ್ಲಿಗೆ ಟಿ20 ಮಾದರಿಯಲ್ಲಿ ನಾಯಕನಾಗಲು ಇಷ್ಟವಿರಲಿಲ್ಲ, ಕೊಹ್ಲಿಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಈ ಕಾರಣಕ್ಕಾಗಿ, ನೀವು ಟಿ20 ನಾಯಕತ್ವವನ್ನು ಬಯಸದಿದ್ದರೆ, ಬಿಳಿ ಚೆಂಡು ಕ್ರಿಕೆಟ್‌ನ ನಾಯಕತ್ವವನ್ನು ತೊರೆಯುವುದು ಉತ್ತಮ ಎಂದು ನಾನು ಕೊಹ್ಲಿಗೆ ಹೇಳಿದೆ. ಹಾಗಾಗಿಯೇ ಕೊಹ್ಲಿ ನಾಯಕತ್ವ ತ್ಯಜಿಸಿದ್ದರು. ಟಿ20 ಮಾದರಿಯ ನಾಯಕತ್ವ ಬೇಡ ಎಂಬುದು ಕೊಹ್ಲಿ ಆಸೆಯಾಗಿತ್ತು ಎಂದು ಗಂಗೂಲಿ ಹೇಳಿದ್ದಾರೆ.

ವಾಸ್ತವವಾಗಿ ಟಿ20 ಮತ್ತು ಏಕದಿನ ಕ್ರಿಕೆಟ್‌ನ ನಾಯಕತ್ವವನ್ನು ಕಳೆದುಕೊಂಡ ನಂತರ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ನಾಯಕತ್ವವನ್ನೂ ತೊರೆದರು. ಅಂದಿನಿಂದ ವಿರಾಟ್ ಬ್ಯಾಟ್ಸ್‌ಮನ್ ಆಗಿ ತಂಡದ ಭಾಗವಾಗಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ಅಭಿಮಾನಿಗಳ ತಪ್ಪು ಕಲ್ಪನೆಯನ್ನು ತೊಡೆದು ಹಾಕಲು ಗಂಗೂಲಿ ಶತಪ್ರಯತ್ನ ಮಾಡುತ್ತಿದ್ದರಾದರೂ ಅದು ಯಶಸ್ವಿಯಾಗಿಲ್ಲ.