
2025 ರಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಪ್ರಯಾಣಿಸದಿರುವ ಬಗ್ಗೆ ಲಿಖಿತ ವಿವರಣೆಯನ್ನು ನೀಡುವಂತೆ ಐಸಿಸಿ, ಬಿಸಿಸಿಐಗೆ ಸೂಚಿಸಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಈ ಮೊದಲು ಬಿಸಿಸಿಐ, ಚಾಂಪಿಯನ್ಸ್ ಟ್ರೋಫಿ ಆಡಲು ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ಮೌಖಿಕವಾಗಿ ಐಸಿಸಿಗೆ ತಿಳಿಸಿತ್ತು.

ಇದೀಗ ಐಸಿಸಿ, ಪಾಕಿಸ್ತಾನಕ್ಕೆ ಯಾವ ಕಾರಣಕ್ಕಾಗಿ ಬರುತ್ತಿಲ್ಲ ಎಂಬುದನ್ನು ಲಿಖಿತವಾಗಿ ನೀಡುವಂತೆ ಬಿಸಿಸಿಐ ಬಳಿ ಕೇಳಿದೆ. ವರದಿ ಪ್ರಕಾರ, ಬಿಸಿಸಿಐನಿ ಈ ನಿರ್ಧಾರದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಸಿಸಿಗೆ ಭಾರತದ ಉತ್ತರದ ಪ್ರತಿಯನ್ನು ನೀಡುವಂತೆ ಮನವಿ ಮಾಡಿತ್ತು. ಬಿಸಿಸಿಐ ನೀಡುವ ಕಾರಣಗಳನ್ನು ಪರಿಶೀಲಿಸಿ ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಪಾಕಿಸ್ತಾನ ಮುಂದಾಗಿದೆ.

ಬಿಸಿಸಿಐ ನೀಡುವ ಕಾರಣಗಳಿಗೆ ಸಾಕ್ಷಿ, ಪುರಾವೆಗಳನ್ನು ಕೇಳುವ ಮೂಲಕ ಐಸಿಸಿ ಮೇಲೆ ಒತ್ತಡ ಹೇರುವುದು ಪಾಕ್ ಮಂಡಳಿಯ ಯೋಜನೆಯಾಗಿದೆ. ಒಂದು ವೇಳೆ ಪಾಕಿಸ್ತಾನ ಕೇಳುವ ಪುರಾವೆಗಳನ್ನು ಬಿಸಿಸಿಐ ಒದಗಿಸಲು ವಿಫಲವಾದರೆ, ಬೇರೆ ದಾರಿ ಇಲ್ಲದೆ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲಿದೆ ಎಂಬುದು ಪಾಕ್ ಮಂಡಳಿಯ ಲೆಕ್ಕಾಚಾರವಾಗಿದೆ.

ಸೂಕ್ತ ಕಾರಣವನ್ನು ನೀಡದ ಹೊರಾಗಿಯೂ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದರೆ, ಆಗ ಟೀಂ ಇಂಡಿಯಾ ಬದಲಿಗೆ ಬೇರೆ ತಂಡವನ್ನು ಈ ಟೂರ್ನಿಗೆ ಆಯ್ಕೆ ಮಾಡಬಹುದಾಗಿದೆ. ಅಲ್ಲದೆ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಭಾರತ ಕ್ರಿಕೆಟ್ ಮೇಲೂ ಐಸಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬಹುದಾಗಿದೆ.

ವಾಸ್ತವವಾಗಿ 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿಯ ನಂತರ ಟೀಂ ಇಂಡಿಯಾ, ಪಾಕಿಸ್ತಾನದ ಪ್ರವಾಸ ಮಾಡಿಲ್ಲ. ಇಷ್ಟೇ ಅಲ್ಲ, ಒಂದು ದಶಕದಿಂದ ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಹೀಗಾಗಿ ಉಭಯ ತಂಡಗಳು ಐಸಿಸಿ ಪಂದ್ಯಾವಳಿಗಳಲ್ಲಿ ಅಥವಾ ಏಷ್ಯಾಕಪ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ.

ಕಳೆದ ಬಾರಿಯ ಏಷ್ಯಾಕಪ್ ಕೂಡ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿತ್ತು. ಆದರೆ ಟೀಂ ಇಂಡಿಯಾ ಮಾತ್ರ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಯನ್ನು ಕೂಡ ಹೈಬ್ರಿಡ್ ಮಾದರಿಯಲ್ಲಿ ಆಡಲು ಯಾವುದೇ ತೊಂದರೆ ಇಲ್ಲ ಎಂದು ಬಿಸಿಸಿಐ ಹೇಳಿದೆ. ಆದರೆ, ಪಿಸಿಬಿ ಮಾತ್ರ ಇದಕ್ಕೆ ಸಿದ್ಧವಾಗಿಲ್ಲ. ಹೀಗಾಗಿ ಈ ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಇದುವರೆಗೂ ಪ್ರಕಟಿಸಲು ಸಾಧ್ಯವಾಗಿಲ್ಲ.

ಇನ್ನು ಈ ಬಗ್ಗೆ ಹೇಳಿಕೆ ನೀಡಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ‘ನಮ್ಮ ನಿಲುವು ಸ್ಪಷ್ಟವಾಗಿದೆ, ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಈ ಬಗ್ಗೆ ನಮಗೆ ಸ್ಪಷ್ಟತೆ ಇದ್ದು, ನಾವು ನಮ್ಮ ನಿಲುವನ್ನು ಈಗಾಗಲೇ ಐಸಿಸಿಗೂ ತಿಳಿಸಿದ್ದೇವೆ ಎಂದಿದ್ದಾರೆ.