
2024ರ ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ 24 ಪಂದ್ಯಗಳು ಮುಗಿದಿವೆ. ಇದರರ್ಥ ಮಿನಿ ವಿಶ್ವ ಸಮರ ತನ್ನ ಅರ್ಧಪಯಣವನ್ನು ಮುಗಿಸುವ ಸನಿಹದಲ್ಲಿದೆ. ಈ ನಡುವೆ ಐಸಿಸಿ ನೂತನ ಟಿ20 ತಂಡಗಳ ರ್ಯಾಂಕಿಂಗ್ ಪ್ರಕಟಿಸಿದ್ದು, ಟಿ20 ವಿಶ್ವಕಪ್‌ನಲ್ಲಿ ತಂಡಗಳು ನೀಡಿರುವ ಪ್ರದರ್ಶನ ರ್ಯಾಂಕಿಂಗ್ ಮೇಲೆ ಭಾರಿ ಪರಿಣಾಮ ಬೀರಿವೆ.

ಐಸಿಸಿ ಇತ್ತೀಚಿನ ಟಿ20 ಅಂತರಾಷ್ಟ್ರೀಯ ತಂಡದ ಶ್ರೇಯಾಂಕವನ್ನು ಬುಧವಾರ ಅಂದರೆ ಇಂದು ಬಿಡುಗಡೆ ಮಾಡಿದೆ. ಈ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತ ತಂಡದ ಪ್ರಾಬಲ್ಯ ಮುಂದುವರಿದಿದೆ. ಆದರೆ 2024ರ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಸೋಲುಗಳನ್ನು ಅನುಭವಿಸಿರುವ ಪಾಕಿಸ್ತಾನ ತಂಡ ಶ್ರೇಯಾಂಕ ಪಟ್ಟಿಯಲ್ಲೂ ಪಾತಳಕ್ಕೆ ಕುಸಿದಿದೆ.

ನೂತನ ಅಂತಾರಾಷ್ಟ್ರೀಯ ಟಿ20 ತಂಡಗಳ ಶ್ರೇಯಾಂಕದ ಪಟ್ಟಿಯಲ್ಲಿ 241 ರೇಟಿಂಗ್ ಅಂಕಗಳನ್ನು ಹೊಂದಿರುವ ಪಾಕಿಸ್ತಾನ ಪ್ರಸ್ತುತ ಏಳನೇ ಸ್ಥಾನಕ್ಕೆ ಕುಸಿದಿದೆ. ಇದಲ್ಲದೆ ಸತತ ಎರಡು ಪಂದ್ಯಗಳನ್ನು ಸೋತಿರುವ ಪಾಕ್ ಪಡೆ ಲೀಗ್ ಹಂತದಲ್ಲೇ ತನ್ನ ಪ್ರಯಾಣವನ್ನು ಮುಗಿಸುವ ಆತಂಕದಲ್ಲಿದೆ.

ಅದೇ ಸಮಯದಲ್ಲಿ ಭಾರತ ತಂಡ 265 ಅಂಕಗಳೊಂದಿಗೆ ನಂಬರ್-1 ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯ ತಂಡ 258 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ 254 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ವೆಸ್ಟ್ ಇಂಡೀಸ್ 253 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅಂದಹಾಗೆ, ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ಪಾಕಿಸ್ತಾನ ಮತ್ತು ಕೆನಡಾವನ್ನು ಸೋಲಿಸಿದ ಅಮೆರಿಕ ಟಿ20 ತಂಡಗಳ ರ್ಯಾಂಕಿಂಗ್ನಲ್ಲಿ ಭಾರಿ ಜಿಗಿತವನ್ನು ಸಾಧಿಸಿ 17 ನೇ ಸ್ಥಾನವನ್ನು ಅಲಂಕರಿಸಿದೆ.

ಮತ್ತೊಂದೆಡೆ ನಮೀಬಿಯಾ ಮತ್ತು ಒಮಾನ್ ತಂಡವನ್ನು ಸೋಲಿಸಿದ್ದ ಸ್ಕಾಟ್ಲೆಂಡ್ ತಂಡ ಕೂಡ ಎರಡು ಸ್ಥಾನ ಮೇಲೇರಿ 12ನೇ ಸ್ಥಾನಕ್ಕೆ ತಲುಪಿದೆ.

ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕಾ ತಂಡ ಆರನೇ ಸ್ಥಾನಕ್ಕೆ ಜಿಗಿದಿದ್ದು, ಪಾಕಿಸ್ತಾನ ತಂಡವನ್ನು 7ನೇ ಸ್ಥಾನಕ್ಕೆ ತಳ್ಳಿದೆ. ಉಳಿದಂತೆ ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿದೆ.
Published On - 3:59 pm, Wed, 12 June 24