ಐಸಿಸಿ ಟೆಸ್ಟ್ ಬ್ಯಾಟರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಇಂಗ್ಲೆಂಡ್ ದಾಂಡಿಗ ಜೋ ರೂಟ್ ಯಶಸ್ವಿಯಾಗಿದ್ದಾರೆ. ಇದಾಗ್ಯೂ ನೂತನ ಟಾಪ್-10 ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೂವರು ಬ್ಯಾಟರ್ಗಳು ಕಾಣಿಸಿಕೊಂಡಿದ್ದಾರೆ.
ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾದ ಯುವ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಈ ಬಾರಿ ಎರಡು ಸ್ಥಾನ ಮೇಲೆರಿದ್ದು, ಈ ಮೂಲಕ 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 792 ಅಂಕಗಳನ್ನು ಕಲೆಹಾಕಿರುವ ಜೈಸ್ವಾಲ್ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ದ್ವಿತೀಯ ಸ್ಥಾನಕ್ಕೇರಬಹುದು.
ಇನ್ನು ಕಳೆದ ಬಾರಿ ಟಾಪ್-10 ಶ್ರೇಯಾಂಕ ಪಟ್ಟಿಯಿಂದ ಹೊರಬಿದ್ದಿದ್ದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಸಲ 6 ಸ್ಥಾನಗಳ ಜಿಗಿತ ಕಂಡಿದ್ದಾರೆ. ಈ ಮೂಲಕ ನೂತನ ಟೆಸ್ಟ್ ಬ್ಯಾಟರ್ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 724 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಈ ಹಿಂದಿನ ಶ್ರೇಯಾಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದ ರಿಷಭ್ ಪಂತ್ ಈ ಬಾರಿ ಮೂರು ಸ್ಥಾನ ಕುಸಿತ ಕಂಡಿದ್ದು, ಇದಾಗ್ಯೂ ಟಾಪ್-10 ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಇದೀಗ 718 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.
ಇನ್ನು ಕಳೆದ ಶ್ರೇಯಾಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿ 5 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಪರಿಣಾಮ ಟಾಪ್-10 ನಿಂದ ಹೊರಬಿದ್ದಿದ್ದು, ಇದೀಗ 693 ಅಂಕಗಳೊಂದಿಗೆ 15ನೇ ಸ್ಥಾನ ಅಲಂಕರಿಸಿದ್ದಾರೆ.
ಹಾಗೆಯೇ ಶುಭ್ಮನ್ ಗಿಲ್ ಈ ಬಾರಿ 16ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 684 ಅಂಕಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಟಾಪ್-10 ಶ್ರೇಯಾಂಕ ಪಟ್ಟಿಗೆ ಎಂಟ್ರಿ ಕೊಡುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.
ಇನ್ನು ನೂತನ ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ (899 ಅಂಕಗಳು) ಅಗ್ರಸ್ಥಾನದಲ್ಲಿದ್ದು, ದ್ವಿತೀಯ ಸ್ಥಾನದಲ್ಲಿ ನ್ಯೂಝಿಲೆಂಡ್ನ ಕೇನ್ ವಿಲಿಯಮ್ಸನ್ (829 ಅಂಕಗಳು) ಕಾಣಿಸಿಕೊಂಡಿದ್ದಾರೆ. ಹಾಗೆಯೇ ಯಶಸ್ವಿ ಜೈಸ್ವಾಲ್ (792 ಅಂಕಗಳು) ಮೂರನೇ ಸ್ಥಾನದಲ್ಲಿದ್ದರೆ, ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (757 ಅಂಕಗಳು) ಇದ್ದಾರೆ. ಐದನೇ ಸ್ಥಾನವನ್ನು ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ (728) ಅಲಂಕರಿಸಿದ್ದಾರೆ.