
ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟವಾಗಿದೆ. ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ 74 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಮಾರ್ನಸ್ ಲಾಬುಶೇನ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಸಹ ಆಟಗಾರ ಸ್ಟೀವ್ ಸ್ಮಿತ್‌ರನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ ಲಾಬುಶೇನ್ ಐಸಿಸಿ ಶ್ರೇಯಾಂಕದಲ್ಲಿ ಎರಡು ಸ್ಥಾನಗಳನ್ನು ಮೇಲೇರಿದ್ದಾರೆ. ಈ ಮೂಲಕ ವಿಶ್ವದ ನಂ.2 ಟೆಸ್ಟ್ ಶ್ರೇಯಾಂಕದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಜೋ ರೂಟ್ ನಂಬರ್ ಒನ್ ಸ್ಥಾನದಲ್ಲಿದ್ದು, ಸ್ಟೀವ್ ಸ್ಮಿತ್ ಮೂರನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಕೇನ್ ವಿಲಿಯಮ್ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡ ಟೆಸ್ಟ್ ಶ್ರೇಯಾಂಕದಲ್ಲಿ ಮೂರು ಸ್ಥಾನ ಮೇಲೇರಿದ್ದು, ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ವಾರ್ನರ್ ಆರನೇ ಸ್ಥಾನಕ್ಕೆ ತಲುಪಿದ್ದಾರೆ.

ಅತ್ತ ಟಾಪ್ 5ನ ಖಾಯಂ ಸದಸ್ಯರಾಗಿದ್ದ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಈಗ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಗೆಯೇ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಟೆಸ್ಟ್ 9ನೇ ಸ್ಥಾನಕ್ಕೇರಿದ್ದಾರೆ.

ಆ್ಯಶಸ್ ಸರಣಿಯ ಮೊದಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಟ್ರಾವಿಸ್ ಹೆಡ್ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಇದೀಗ 10ನೇ ಸ್ಥಾನ ಅಲಂಕರಿಸಿದ್ದಾರೆ.

ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಕೂಡ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವೇಗದ ಬೌಲರ್ 3 ನೇ ಸ್ಥಾನವನ್ನು ತಲುಪಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿದೆ.