
ಐಸಿಸಿ ಟೆಸ್ಟ್ ಆಟಗಾರರ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಟಾಪ್-10 ನಲ್ಲಿ ಸ್ಥಾನ ಪಡೆದಿದ್ದಾರೆ. ಇಲ್ಲಿ ಬ್ಯಾಟರ್ಗಳ ಪಟ್ಟಿಯಲ್ಲಿ ಇಬ್ಬರು ಕಾಣಿಸಿಕೊಂಡರೆ, ಬೌಲರ್ಗಳ ಪಟ್ಟಿಯಲ್ಲಿ ಓರ್ವ ಸ್ಥಾನ ಪಡೆದಿದ್ದಾರೆ. ಇನ್ನು ಆಲ್ರೌಂಡರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಟೀಮ್ ಇಂಡಿಯಾ ಆಟಗಾರನಿರುವುದು ವಿಶೇಷ. ಹಾಗಿದ್ರೆ ಯಾರು ಯಾವ ಸ್ಥಾನದಲ್ಲಿದ್ದಾರೆ ಎಂದು ನೋಡೋಣ...

ಐಸಿಸಿ ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ 4ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 101 ರನ್ಗಳ ಭರ್ಜರಿ ಶತಕ ಸಿಡಿಸಿದ ಜೈಸ್ವಾಲ್ ಇದೀಗ 851 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಮಿಂಚಿದ್ದ ರಿಷಭ್ ಪಂತ್ 801 ಅಂಕಗಳೊಂದಿಗೆ ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸಿದ್ದಾರೆ. ಇದು ಭಾರತೀಯ ವಿಕೆಟ್ ಕೀಪರ್ನ ಸರ್ವಶ್ರೇಷ್ಠ ಸಾಧನೆ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾದ ಯಾವುದೇ ವಿಕೆಟ್ ಕೀಪರ್ ಟೆಸ್ಟ್ ರ್ಯಾಂಕಿಂಗ್ನಲ್ಲಿ 800 ಕ್ಕಿಂತ ಅಧಿಕ ಅಂಕಗಳನ್ನು ಪಡೆದಿರಲಿಲ್ಲ. ಇದೀಗ 801 ರೇಟಿಂಗ್ನೊಂದಿಗೆ ಪಂತ್ ಏಳನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಐಸಿಸಿ ಟೆಸ್ಟ್ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ. ಹೆಡಿಂಗ್ಲೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದ ಬುಮ್ರಾ 907 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಬುಮ್ರಾ ಅವರನ್ನು ಹೊರತುಪಡಿಸಿ ಟೀಮ್ ಇಂಡಿಯಾದ ಯಾವುದೇ ಬೌಲರ್ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿಲ್ಲ.

ಹಾಗೆಯೇ ಐಸಿಸಿ ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ. 376 ಅಂಕಗಳನ್ನು ಹೊಂದಿರುವ ಜಡೇಜಾ ಕಳೆದ ಕೆಲ ತಿಂಗಳಿಂದ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಇಂಗ್ಲೆಂಡ್ ವಿರುದ್ಧ ಉಳಿದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಅವರ ರೇಟಿಂಗ್ 400 ದಾಟುವ ಸಾಧ್ಯತೆಯಿದೆ.
Published On - 8:31 am, Thu, 26 June 25