200+200… ಹೊಸ ವಿಶ್ವ ದಾಖಲೆ ನಿರ್ಮಿಸಿದ ಡೇವಿಡ್ ವಾರ್ನರ್
David Warner Record: ಟಿ20 ಕ್ರಿಕೆಟ್ನಲ್ಲಿ ಈವರೆಗೆ 414 ಇನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ ಒಟ್ಟು 13386 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 8 ಶತಕಗಳು ಹಾಗೂ 111 ಅರ್ಧಶತಕಗಳು ಮೂಡಿಬಂದಿವೆ. ಅಲ್ಲದೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಾರ್ನರ್ 6ನೇ ಸ್ಥಾನದಲ್ಲಿದ್ದಾರೆ.
Updated on: Jun 26, 2025 | 2:55 PM

ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಡೇವಿಡ್ ವಾರ್ನರ್ (David Warner) ಸಂಪೂರ್ಣವಾಗಿ ಟಿ20 ಲೀಗ್ನತ್ತ ಮುಖ ಮಾಡಿದ್ದಾರೆ. ಕಳೆದ ತಿಂಗಳು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದ ವಾರ್ನರ್ ಇದೀಗ ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಿಯಾಟಲ್ ಓರ್ಕಾಸ್ ತಂಡದ ಭಾಗವಾಗಿರುವ ವಾರ್ನರ್ ಈವರೆಗೆ 5 ಪಂದ್ಯಗಳನ್ನಾಡಿದ್ದಾರೆ. ಈ ಐದು ಮ್ಯಾಚ್ಗಳಲ್ಲಿ ಡೇವಿಡ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದಾಗ್ಯೂ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಮ್ಯಾಚ್ನಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಎರಡು ಕ್ಯಾಚ್ಗಳನ್ನು ಹಿಡಿದಿದ್ದರು.

ಈ ಕ್ಯಾಚ್ಗಳೊಂದಿಗೆ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ನಲ್ಲಿ 200 ಕ್ಯಾಚ್ಗಳ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 200+ ಹಾಗೂ ಟಿ20 ಕ್ರಿಕೆಟ್ನಲ್ಲಿ 200 ಕ್ಯಾಚ್ಗಳನ್ನು ಹಿಡಿದ ವಿಶ್ವದ ಏಕೈಕ ಫೀಲ್ಡರ್ ಎಂಬ ವಿಶ್ವ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮದಾಗಿಸಿಕೊಂಡಿದ್ದಾರೆ.

ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ 415 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 201 ಕ್ಯಾಚ್ಗಳನ್ನು ಹಿಡಿಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಾರ್ನರ್ ಹೆಸರಿನಲ್ಲಿ 223 ಕ್ಯಾಚ್ಗಳಿವೆ. ಈ ಮೂಲಕ ಆಸ್ಟ್ರೇಲಿಯಾದ ಎಡಗೈ ದಾಂಡಿಗ ಫೀಲ್ಡಿಂಗ್ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಕ್ಯಾಚ್ ಹಿಡಿದ ವಿಶ್ವ ದಾಖಲೆ ಇರುವುದು ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಹೆಸರಿನಲ್ಲಿ. ಪೊಲಾರ್ಡ್ ಈವರೆಗೆ 700 ಟಿ20 ಪಂದ್ಯಗಳನ್ನಾಡಿದ್ದು, ಈ ವೇಳೆ 386 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಪೊಲಾರ್ಡ್ ನಂತರದ ಸ್ಥಾನದಲ್ಲಿ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್ ಇದ್ದು, ಈವರೆಗೆ 318 ಕ್ಯಾಚ್ಗಳನ್ನು ಹಿಡಿದಿದ್ದಾರೆ.









