ಐಸಿಸಿ ಟೆಸ್ಟ್ ತಂಡಗಳ ನೂತನ ರ‍್ಯಾಂಕಿಂಗ್ ಪ್ರಕಟವಾಗಿದೆ. 12 ತಂಡಗಳ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದರೆ, ಸೌತ್ ಆಫ್ರಿಕಾ ದ್ವಿತೀಯ ಸ್ಥಾನ ಅಲಂಕರಿಸಿದೆ. ವಿಶೇಷ ಎಂದರೆ ಈ ಎರಡು ಟಾಪ್ ತಂಡಗಳೇ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಲಿದೆ.
ಇನ್ನು ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಈ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಈ ಬಾರಿ ಭಾರೀ ಕುಸಿತಕ್ಕೊಳಗಾಗಿದೆ. ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ಸರಣಿ ಸೋತಿದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಿಂದ ಪರಾಜಯಗೊಂಡಿದೆ. ಪರಿಣಾಮ ಐಸಿಸಿ ಟೆಸ್ಟ್ ತಂಡಗಳ ನೂತನ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಸದ್ಯ 36 ಟೆಸ್ಟ್ ಪಂದ್ಯಗಳಲ್ಲಿ 4531 ಅಂಕಗಳೊಂದಿಗೆ 126 ರೇಟಿಂಗ್ ಪಡೆದಿರುವ ಆಸ್ಟ್ರೇಲಿಯಾ ತಂಡವು, ಐಸಿಸಿ ಟೆಸ್ಟ್ ತಂಡಗಳ ನೂತನ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಆಸೀಸ್ ಪಡೆ ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ಪಾರುಪತ್ಯ ಮರೆದಿದೆ.
ಇನ್ನು ಸೌತ್ ಆಫ್ರಿಕಾ ತಂಡವು 30 ಟೆಸ್ಟ್ ಪಂದ್ಯಗಳಿಂದ ಒಟ್ಟು 3355 ಅಂಕಗಳನ್ನು ಕಲೆಹಾಕಿದೆ. ಅಲ್ಲದೆ 112 ರೇಟಿಂಗ್ ಪಡೆಯುವ ಮೂಲಕ ಟೆಸ್ಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ.
ಭಾರತ ತಂಡವು 39 ಪಂದ್ಯಗಳಿಂದ 4248 ಅಂಕಗಳನ್ನು ಕಲೆಹಾಕಿದೆ. ಇದಾಗ್ಯೂ ಸತತ ಸೋಲುಗಳಿಂದ ಟೀಮ್ ಇಂಡಿಯಾ ರೇಟಿಂಗ್ ಕಳೆದುಕೊಂಡಿದೆ. ಈ ಮೂಲಕ ಒಟ್ಟು 109 ರೇಟಿಂಗ್ನೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇನ್ನು ಇಂಗ್ಲೆಂಡ್ (106) ನಾಲ್ಕನೇ ಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ (96) ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಶ್ರೀಲಂಕಾ (87) ಆರನೇ ಸ್ಥಾನದಲ್ಲಿದ್ದು, ಏಳನೇ ಸ್ಥಾನದಲ್ಲಿ ಪಾಕಿಸ್ತಾನ್ (83) ತಂಡವಿದೆ. ಇನ್ನು ವೆಸ್ಟ್ ಇಂಡೀಸ್ (75) ಎಂಟನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ್ (65) ಒಂಭತ್ತನೇ ಮತ್ತು ಐರ್ಲೆಂಡ್ (26) ಹತ್ತನೇ ಸ್ಥಾನದಲ್ಲಿದೆ. ಹಾಗೆಯೇ ಅಫ್ಘಾನಿಸ್ತಾನ್ (19) ಮತ್ತು ಝಿಂಬಾಬ್ವೆ (0) ತಂಡಗಳು ಕ್ರಮವಾಗಿ 11ನೇ ಮತ್ತು 12ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ.