
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಟಿ20 ಸರಣಿಯಲ್ಲೂ ಮೊದಲ ಪಂದ್ಯ ಗೆದ್ದ ಭಾರತ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು ಸ್ಯಾಂಟ್ ಕಿಟ್ಸ್ ನ ವಾರ್ನರ್ ಪಾರ್ಕ್ ಮೈದಾನದಲ್ಲಿ ಇಂಡೋ– ವಿಂಡೀಸ್ ಎರಡನೇ ಟಿ20 ಪಂದ್ಯ ನಡೆಯಲಿದೆ.

ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಂಡಿತಾದರೂ ಮಧ್ಯಮ ಕ್ರಮಾಂಕದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಆರಂಭದಲ್ಲಿ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಹಾಗೂ ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಾರಣ ತಂಡದ ಮೊತ್ತ 190ಕ್ಕೆ ಬಂದು ನಿಂತಿತು.

ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ನಿರ್ಗಮಿಸಿದರೆ, ರಿಷಭ್ ಪಂತ್ (14) ಹಾಗೂ ಹಾರ್ದಿಕ್ ಪಾಂಡ್ಯ (1) ಆಟ ಕೂಡ ನಡೆಯಲಿಲ್ಲ. ಸೂರ್ಯಕುಮಾರ್ ಯಾದವ್ ಓಪನರ್ ಆಗಿ ಕಣಕ್ಕಿಳಿದಿದ್ದರು.

ಸೂರ್ಯ ಅವರಿಗೆ ಆರಂಭಿಕನಾಗಿ ಆಡಿ ಅಷ್ಟೊಂದು ಅನುಭವವಿಲ್ಲ. ಅವರು ಮಧ್ಯಮ ಕ್ರಮಾಂಕಕ್ಕೆ ಫಿಟ್ ಆಗಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಿ ರೋಹಿತ್ ಜೊತೆ ಕಣಕ್ಕಿಳಿಸುವ ಸಾಧ್ಯತೆ ಇದೆ. ಉಳಿದಂತೆ ರವೀಂದ್ರ ಜಡೇಜಾ ಕಡೆಯಿಂದ ತಂಡಕ್ಕೆ ಇನ್ನಷ್ಟು ಕೊಡುಗೆ ಬೇಕಿದೆ.

ಸಂಜು ಸ್ಯಾಮ್ಸನ್ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ಕೂಡ ನಡೆಸುತ್ತಿದ್ದಾರೆ.

ಬೌಲಿಂಗ್ ನಲ್ಲಿ ಭಾರತ ಮಾರಕವಾಗಿದೆ. ಯುವ ವೇಗಿ ಅರ್ಶ್ ದೀಪ್ ಸಿಂಗ್ ಅಂತೂ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಜಿಕೊಳ್ಳುತ್ತಿದ್ದಾರೆ. ಮೊದಲ ಟಿ20 ಯಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 24 ರನ್ ನೀಡಿ 2 ವಿಕೆಟ್ ಕಿತ್ತಿದ್ದರು. ಟಿ20 ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿರುವ ರವಿಚಂದ್ರನ್ ಅಶ್ವಿನ್ ಕೂಡ ಮೋಡಿ ಮಾಡಿದ್ದಾರೆ. ರವಿ ಬಿಷ್ಟೋಯಿ ಕೂಡ 2 ವಿಕೆಟ್ ಪಡೆದು ಮಿಂಚಿದ್ದರು.

ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಡಿಡಿ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ಕಾಣಲಿದೆ. ಫ್ಯಾನ್ ಕೋಡ್ ಆ್ಯಪ್ ನಲ್ಲಿ ಕೂಡ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.