
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 172 ರನ್ ಗಳಿಸಿದೆ. ಈ ಮೂಲಕ ಭಾರತಕ್ಕೆ 173 ರನ್‌ಗಳ ಟಾರ್ಗೆಟ್ ನೀಡಿದೆ. ಈ 172 ರನ್ ಕಲೆಹಾಕುವ ಮೂಲಕ ಅಫ್ಘಾನಿಸ್ತಾನ ತಂಎ ಮೂರು ದಿನಗಳ ಹಿಂದೆ ನಿರ್ಮಿಸಿದ್ದ ತನ್ನದೇ ಆದ ದಾಖಲೆಯನ್ನು ಮುರಿದಿದೆ.

ಮೇಲೆ ಹೇಳಿದಂತೆ ಭಾರತದ ವಿರುದ್ಧದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ 172 ರನ್ ಗಳಿಸಿದೆ. ಇದು ಟಿ20 ಮಾದರಿಯಲ್ಲಿ ಭಾರತದ ವಿರುದ್ಧ ಅಫ್ಘಾನಿಸ್ತಾನ ಕಲೆಹಾಕಿದ ಅತಿ ದೊಡ್ಡ ಸ್ಕೋರ್ ಆಗಿದೆ. ಇದಕ್ಕೂ ಮೊದಲು ಜನವರಿ 11 ರಂದು ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ 158 ರನ್ ಗಳಿಸಿತ್ತು.

ಇದಕ್ಕೂ ಮೊದಲು ಅಫ್ಘಾನಿಸ್ತಾನ ಈ ಮಾದರಿಯಲ್ಲಿ ಟೀಂ ಇಂಡಿಯಾ ವಿರುದ್ಧ ಇಷ್ಟು ದೊಡ್ಡ ಸ್ಕೋರ್ ಗಳಿಸಿರಲಿಲ್ಲ. ಇದು ಸರಣಿಯ ನಿರ್ಣಾಯಕ ಪಂದ್ಯವಾಗಿರುವುದರಿಂದ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಅಫ್ಘಾನಿಸ್ತಾನ ಭಾರತಕ್ಕೆ ಸ್ಪರ್ಧಾತ್ಮಕ ಮೊತ್ತವನ್ನೇ ಟಾರ್ಗೆಟ್ ಆಗಿ ನೀಡಿದೆ.

ಅಫ್ಘಾನಿಸ್ತಾನವನ್ನು 172 ರನ್‌ಗಳ ಸ್ಕೋರ್‌ಗೆ ಕೊಂಡೊಯ್ಯುವಲ್ಲಿ ಗುಲ್ಬದಿನ್ ನೈಬ್ ದೊಡ್ಡ ಕೊಡುಗೆ ನೀಡಿದರು. ನೈಬ್ ಕೇವಲ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಿತ 162.85 ಸ್ಟ್ರೈಕ್ ರೇಟ್ನಲ್ಲಿ 57 ರನ್ ಕಲೆಹಾಕಿದರು. ಗುಲ್ಬದಿನ್ ಹೊರತುಪಡಿಸಿ, ನಜಿಬುಲ್ಲಾ ಝದ್ರಾನ್ 23 ರನ್, ಮುಜೀಬ್ ಉರ್ ರೆಹಮಾನ್ 21 ರನ್ ಮತ್ತು ಕರೀಂ ಜನತ್ 20 ರನ್‌ಗಳ ಕಾಣಿಕೆ ನೀಡಿದರು.

ಇನ್ನು ಭಾರತದ ಪರ ಅರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದರೆ, ಮತ್ತೊಂದೆಡೆ ರವಿ ಬಿಷ್ಣೋಯ್ ಮತ್ತು ಅಕ್ಷರ್ ಪಟೇಲ್ ತಲಾ ತಲಾ 2 ವಿಕೆಟ್ ಪಡೆದರು. ಹಾಗೆಯೇ ಶಿವಂ ದುಬೆ ಕೂಡ ಒಂದು ವಿಕೆಟ್ ಪಡೆದರು.