ಇಂದೊರ್ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇತ್ತ ಭಾರತದ ನೆಲದಲ್ಲಿ ಟಿ20 ಸರಣಿ ಗೆಲ್ಲಬೇಕು ಎಂಬ ಅಫ್ಘಾನಿಸ್ತಾನದ ಕನಸು ನುಚ್ಚು ನೂರಾಗಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 173 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರ ಅರ್ಧಶತಕದ ನೆರವಿನಿಂದ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸವಾಲನ್ನು ಪೂರ್ಣಗೊಳಿಸಿತು.
ಈ ಇಬ್ಬರನ್ನು ಹೊರತುಪಡಿಸಿ ಬರೋಬ್ಬರಿ 14 ತಿಂಗಳ ನಂತರ ಟಿ20 ಕ್ರಿಕೆಟ್ಗೆ ಮರಳಿದ ವಿರಾಟ್ ಕೊಹ್ಲಿ ಕೇವಲ 16 ಎಸೆತಗಳಲ್ಲಿ 5 ಬೌಂಡರಿ ಸಹಿತ 29 ರನ್ ಕಲೆಹಾಕಿ ಆಯ್ಕೆಗಾರರಿಗೆ ತಕ್ಕ ತಿರುಗೇಟು ನೀಡಿದರು. ಆದರೆ ಕೊಹ್ಲಿಯಂತೆ ಬಹಳ ತಿಂಗಳುಗಳ ನಂತರ ಟಿ20 ಮಾದರಿಗೆ ಮರಳಿದ್ದ ನಾಯಕ ರೋಹಿತ್ಗೆ ಈ ಸರಣಿ ದುಸ್ವಪ್ನದಂತೆ ಕಾಡಿದೆ.
ವಾಸ್ತವವಾಗಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾಗೆ ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ 150 ನೇ ಪಂದ್ಯವಾಗಿತ್ತು. ಈ ಮೂಲಕ ರೋಹಿತ್, ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪದಲ್ಲಿ 150 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಪುರುಷ ಕ್ರಿಕೆಟಿಗ ಎನಿಸಿಕೊಂಡರು.
ಆದರೆ ಈ ಐತಿಹಾಸಿಕ ಪಂದ್ಯದಲ್ಲಿ ರೋಹಿತ್ ತಮ್ಮ ಅಭಿಮಾನಿಗಳನ್ನು ಬಹಳವಾಗಿ ನಿರಾಶೆಗೊಳಿಸಿದರು. ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯ ಸ್ಕೋರ್‌ನಲ್ಲಿ ರನ್ ಔಟ್ ಆಗಿದ್ದ ರೋಹಿತ್, ಎರಡನೇ ಟಿ20 ಪಂದ್ಯದಲ್ಲೂ ಗೋಲ್ಡನ್ ಡಕ್ ಆದರು.
ಚುಟುಕು ಮಾದರಿಯಲ್ಲಿ ಇದು ರೋಹಿತ್ ಅವರ 12ನೇ ಶೂನ್ಯ ಸಂಪಾದನೆಯಾಗಿದೆ. ಈ ಮೂಲಕ ಈ ಸ್ವರೂಪದಲ್ಲಿ 12 ಬಾರಿ ಡಕ್‌ಗೆ ಔಟಾಗಿದ್ದ ಕೆವಿನ್ ಒ'ಬ್ರಿಯನ್ ಅವರ ಬೇಡದ ದಾಖಲೆಯನ್ನು ರೋಹಿತ್ ಸರಿಗಟ್ಟಿದರು. ಅಲ್ಲದೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅಧಿಕ ಬಾರಿ ಡಕ್ ಔಟ್ ಆದ ವಿಷಯದಲ್ಲಿ ರೋಹಿತ್ ಇದೀಗ ಎರಡನೇ ಸ್ಥಾನ ತಲುಪಿದ್ದಾರೆ.
ಹಾಗೆಯೇ ಟಿ20 ಮಾದರಿಯಲ್ಲಿ ಭಾರತ ಪರ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.
ಇದರೊಂದಿಗೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಯಕನಾಗಿ ಗರಿಷ್ಠ ಬಾರಿ ಡಕ್‌ಗೆ ವಿಕೆಟ್ ಒಪ್ಪಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಇದುವರೆಗೆ ನಾಯಕನಾಗಿ 6 ಬಾರಿ ಶೂನ್ಯ ಸಾಧನೆ ಮಾಡಿದ್ದಾರೆ.