Updated on: Mar 19, 2023 | 7:48 PM
ಎಸಿಎ-ವಿಸಿಎ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತ ಕ್ರಿಕೆಟ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾಂಗರೂಗಳು ಇದಕ್ಕೆ ಅವಕಾಶ ನೀಡಲಿಲ್ಲ. ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಏಕಪಕ್ಷೀಯವಾಗಿ ಭಾರತವನ್ನು ಮಣಿಸಿ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಇದಾದ ಬಳಿಕ ಇದೀಗ ಸರಣಿಯ ಮೂರನೇ ಪಂದ್ಯ ನಿರ್ಣಾಯಕವಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಕೈವಶ ಮಾಡಿಕೊಳ್ಳಲಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 26 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು. ಇದಾದ ಬಳಿಕ ಆಸ್ಟ್ರೇಲಿಯ ಯಾವುದೇ ವಿಕೆಟ್ ನಷ್ಟವಿಲ್ಲದೆ 11 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಿತು. ಹಾಗಿದ್ದರೆ ಭಾರತ ಹೀಗೆ ಹೀನಾಯವಾಗಿ ಸೋಲಲು ಕಾರಣವೇನು ಎಂಬುದನ್ನು ನೋಡೋಣ ಬನ್ನಿ.
ಈ ಪಂದ್ಯದಲ್ಲಿ ಟಾಸ್ ಪ್ರಮುಖವಾಗಿತ್ತಾದರೂ ಭಾರತದ ಪರವಾಗಿ ನಾಣ್ಯ ಬೀಳಲಿಲ್ಲ. ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಪಿಚ್ ನೋಡಿಕೊಂಡು ಫೀಲ್ಡಿಂಗ್ ಆಯ್ಕೆ ಮಾಡಿ ಭಾರತವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಭಾರತ ಇಲ್ಲಿ ಕಷ್ಟ ಅನುಭವಿಸಬೇಕಾಯಿತು.
ಈ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಅಥವಾ ಶುಭ್ಮನ್ ಗಿಲ್ ಅವರ ಬ್ಯಾಟ್ ಅಲ್ಲ. ಸೂರ್ಯಕುಮಾರ್ ಯಾದವ್ ಕೂಡ ಬೇಗನೇ ಪೆವಿಲಿಯನ್ಗೆ ಮರಳಿದರು. ತಂಡಕ್ಕೆ ಉತ್ತಮ ಆರಂಭ ಸಿಗದ ಕಾರಣ ದೊಡ್ಡ ಮೊತ್ತದ ನಿರೀಕ್ಷೆಗೆ ಪೆಟ್ಟು ಬಿದ್ದಿತು.
ಕೆಟ್ಟ ಆರಂಭದ ನಂತರ ಮಧ್ಯಮ ಕ್ರಮಾಂಕದಲ್ಲೂ ತಂಡ ಎಡವಿತು. ವಿರಾಟ್ ಕೊಹ್ಲಿ 31 ರನ್ ಗಳಿಸಿ ತಂಡದ ಅಗ್ರ ಸ್ಕೋರರ್ ಎನಿಸಿಕೊಂಡರು. ಅವರು ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ ಅವರೊಂದಿಗೆ 29 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಇದು ಈ ಪಂದ್ಯದಲ್ಲಿ ಭಾರತದ ಅತಿದೊಡ್ಡ ಪಾಲುದಾರಿಕೆಯಾಗಿತ್ತು.
ವಿರಾಟ್ ಕೊಹ್ಲಿ ಸೆಟ್ ಆದ ನಂತರ, ಸ್ಟ್ರೈಟ್ ಬಾಲ್‌ಗೆ ಎಲ್ಬಿಡಬ್ಲ್ಯೂ ಆದರು. ಇದು ಭಾರತಕ್ಕೆ ದೊಡ್ಡ ಹೊಡೆತ ನೀಡಿತು. ಒಂದು ವೇಳೆ ಕೊಹ್ಲಿ ಬಿಗ್ ಇನ್ನಿಂಗ್ಸ್ ಆಡಿದರೆ, ಪಂದ್ಯದ ದಿಕ್ಕೇ ಬದಲಾಗುತ್ತಿತ್ತು.
ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ ಭಾರತದ ಬೌಲರ್‌ಗಳೂ ನಿರಾಸೆ ಮೂಡಿಸಿದರು. ಇಡೀ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿಗಳಿಗೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
Published On - 7:48 pm, Sun, 19 March 23