ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಏಕದಿನ ಕ್ರಿಕೆಟ್ ಕೆರಿಯರ್ಗೆ ಕಾರ್ಮೋಡ ಕವಿದಿದೆ. ಏಕೆಂದರೆ ಸತತ ಅವಕಾಶ ಲಭಿಸಿದರೂ ಸೂರ್ಯ ಮಾತ್ರ ಪ್ರಜ್ವಲಿಸುತ್ತಿಲ್ಲ. ಅದರಲ್ಲೂ ಕ್ರೀಸ್ಗೆ ಆಗಮಿಸಿದ ವೇಗದಲ್ಲೇ ಹಿಂತಿರುಗುತ್ತಿರುವುದು ಇದೀಗ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಇದೇ ಕಾರಣದಿಂದ ಇದೀಗ ಏಕದಿನ ವಿಶ್ವಕಪ್ ತಂಡದಿಂದ ಸೂರ್ಯಕುಮಾರ್ ಯಾದವ್ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.
ಈ ವರ್ಷದ ಆರಂಭದಲ್ಲೇ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ಗಾಗಿ ಬಲಿಷ್ಠ ತಂಡವನ್ನು ರೂಪಿಸುವ ಸೂಚನೆ ನೀಡಿತ್ತು. ಇದಕ್ಕಾಗಿ 20 ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿತ್ತು. ಹೀಗೆ ಕಳೆದ ಕೆಲ ಸರಣಿಗಳಲ್ಲಿ ಸತತ ಅವಕಾಶ ಪಡೆದ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಒಬ್ಬರು.
ಆದರೆ ಏಕದಿನ ಕ್ರಿಕೆಟ್ನಲ್ಲಿ 20 ಇನಿಂಗ್ಸ್ ಆಡಿದರೂ ಸೂರ್ಯಕುಮಾರ್ ಯಾದವ್ ಅವರ ಸರಾಸರಿ ರನ್ಗಳಿಕೆಯು 25 ರಲ್ಲೇ ಇದೆ ಎಂಬುದೇ ಅಚ್ಚರಿ. ಅದರಲ್ಲೂ ಕೊನೆಯ 5 ಇನಿಂಗ್ಸ್ಗಳನ್ನು ತೆಗೆದುಕೊಂಡರೆ 2 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನು ಕೊನೆಯ 10 ಏಕದಿನ ಇನಿಂಗ್ಸ್ಗಳಲ್ಲಿ ಅವರ ಬ್ಯಾಟ್ನಿಂದ ಮೂಡಿಬಂದ ಗರಿಷ್ಠ ಸ್ಕೋರ್ ಕೇವಲ 34 ರನ್ ಮಾತ್ರ.
2021 ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್ 3 ಇನಿಂಗ್ಸ್ ಮೂಲಕ 124 ರನ್ ಬಾರಿಸಿ ಹೊಸ ಭರವಸೆ ಮೂಡಿಸಿದ್ದರು. ಆದರೆ 2022 ರಲ್ಲಿ 12 ಇನಿಂಗ್ಸ್ಗಳಲ್ಲಿ ಕೇವಲ 260 ರನ್ ಕಲೆಹಾಕಿದ್ದರು. ಈ ವರ್ಷ 5 ಇನಿಂಗ್ಸ್ನಲ್ಲಿ ಕಲೆಹಾಕಿರುವುದು ಕೇವಲ 49 ರನ್ ಮಾತ್ರ.
ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಗೋಲ್ಡನ್ ಡಕ್ಗೆ ಔಟಾಗಿದ್ದಾರೆ. ಎರಡು ಬಾರಿ ಕೂಡ ಮಿಚೆಲ್ ಸ್ಟಾರ್ಕ್ ಎಸೆತಗಳಲ್ಲಿ ಎಲ್ಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದ್ದರು. ಇದೀಗ ಕಾರಣದಿಂದಾಗಿ ಇದೀಗ ಸೂರ್ಯಕುಮಾರ್ ಯಾದವ್ ಅವರ ಆಯ್ಕೆ ಬಗ್ಗೆ ಪ್ರಶ್ನೆಗಳೆದ್ದಿವೆ.
ಏಕೆಂದರೆ ಏಕದಿನ ಕ್ರಿಕೆಟ್ನಲ್ಲಿ 20 ಇನಿಂಗ್ಸ್ ಆಡಿದರೂ ಸೂರ್ಯಕುಮಾರ್ ಯಾದವ್ 25.47 ಸರಾಸರಿಯಲ್ಲಿ ಕೇವಲ 433 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಮುಂಬೈ ಆಟಗಾರನಿಗೆ ಸತತವಾಗಿ ಅವಕಾಶ ನೀಡಲಾಗುತ್ತಿದೆ.
ಮತ್ತೊಂದೆಡೆ 10 ಏಕದಿನ ಇನಿಂಗ್ಸ್ನಲ್ಲಿ 66 ಸರಸಾರಿಯಲ್ಲಿ 330 ರನ್ ಪೇರಿಸಿರುವ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ ಎಂಬುದೇ ಅಚ್ಚರಿ.
Published On - 6:30 pm, Sun, 19 March 23