ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಸತತ ಐದು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಇದೀಗ ಒಂದರ ಹಿಂದೆ ಒಂದರಂತೆ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫರ್ ರೇಸ್ನಲ್ಲಿ ಉಳಿದುಕೊಂಡಿದೆ.
ಶನಿವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಗೈಂಟ್ಸ್ ವಿರುದ್ಧದ ಪಂದ್ಯದಲ್ಲಂತು ಆರ್‌ಸಿಬಿ ಮಹಿಳಾ ತಂಡದ ಬ್ಯಾಟರ್ಗಳು ಅಬ್ಬರಿಸಿದರು. ಅದರಲ್ಲೂ ಸೋಫಿ ಡಿವೈನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡ 8 ವಿಕೆಟ್ಗಳ ಜಯ ಸಾಧಿಸುವಲ್ಲಿ ಮುಖ್ಯ ಪಾತ್ರವಹಿಸಿದರು.
ಕೇವಲ 36 ಎಸೆತಗಳನ್ನು ಎದುರಿಸಿದ ಸೋಫಿ ಡಿವೈನ್ ಬರೋಬ್ಬರಿ 8 ಸಿಕ್ಸರ್, 9 ಫೋರ್ನೊಂದಿಗೆ 99 ರನ್ಗೆ ಔಟಾದರು. ಈ ಮೂಲಕ 1 ರನ್ಗಳಿಂದ ಶತಕ ವಂಚಿತರಾದರು. ಈ ಆಟ ನೋಡಿ ಪುಳಕಗೊಂಡ ಅಭಿಮಾನಿಗಳು ಡಿವೈನ್ ಆರ್‌ಸಿಬಿಯ ಕ್ರಿಸ್ ಗೇಲ್ ಎಂದು ಹೇಳುತ್ತಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಇವರು ಏನು ಹೇಳಿದ್ದಾರೆ ನೋಡಿ.
ನಾವು ಪ್ಲೇ ಆಫ್ ರೇಸ್ನಲ್ಲಿ ಇನ್ನೂ ಜೀವಂತವಾಗಿದ್ದೇವೆ. ಕೆಲವು ಪಂದ್ಯಗಳನ್ನು ನಾನು ಗಮನಿಸಿದ್ದೇನೆ. ಪ್ರತಿ ದಿನ ಇಲ್ಲಿ ಒಂದೊಂದು ವಿಚಾರಗಳನ್ನು ಕಲಿಯುತ್ತಿದ್ದೇವೆ. ಈ ವಾತಾವರಣ ತುಂಬಾ ಕಷ್ಟಕರವಾಗಿತ್ತು. ಬೌಲರ್ಗಳು ಹರಸಾಹಸ ಪಟ್ಟರು. 99 ರನ್ಗೆ ಔಟಾಗಿದ್ದು ಬೇಸರವಿಲ್ಲ. ತಂಡಕ್ಕಾಗಿ ಕೊಡುಗೆ ನೀಡುವುದು ಮುಖ್ಯ ಎಂಬುದಾಗಿ ಸೋಫಿ ಡಿವೈನ್ ಹೇಳಿದ್ದಾರೆ.
ಗುಜರಾತ್ ನೀಡಿದ 189 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ 15.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸೋಫಿ ಹಾಗೂ ನಾಯಕಿ ಸ್ಮೃತಿ ಮಂದಾನ (37) ಮೊದಲ ವಿಕೆಟ್ ಜೊತೆಯಾಟದಲ್ಲಿ 125 ರನ್ ಗಳಿಸಿದರು. ಚೆಂಡನ್ನು ಮನಬಂದಂತೆ ದಂಡಿಸಿದ ಡಿವೈನ್ ಅಕ್ಷರಶಃ ಕ್ರೀಡಾಂಗಣದಲ್ಲಿ ಅಲೆ ಎಬ್ಬಿಸಿದರು. ಟಿ20 ಕ್ರಿಕೆಟ್ನ ರಸದೌತಣ ನೀಡಿದರು.
ನ್ಯೂಜಿಲೆಂಡ್ ತಂಡದಲ್ಲಿ ಬೌಲರ್ ಆಗಿ ವೃತ್ತಿಜೀವನ ಆರಂಭಿಸಿದ್ದ ಸೋಫಿ, ಬಳಿಕ ಆಲ್ರೌಂಡರ್ ಆಗಿ ಗುರುತಿಸಿಕೊಂಡರು. ಟಿ20 ಪಂದ್ಯದಲ್ಲಿ ಇದು ಅವರ ಅತ್ಯದ್ಭುತ ಪ್ರದರ್ಶನವಾಗಿದೆ.
ಸ್ಮೃತಿ- ಸೋಫಿ ನಿರ್ಗಮನದ ಬಳಿಕ ಎಲಿಸ್ ಪೆರಿ (ಔಟಾಗದೆ 19) ಮತ್ತು ಹೀದರ್ ನೈಟ್ (ಔಟಾಗದೆ 22) ತಂಡವನ್ನು ಜಯದ ದಡ ಸೇರಿಸಿದರು. ಈ ಮೂಲಕ ಆರ್‌ಸಿಬಿ ತಂಡ 27 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಗೈಂಟ್ಸ್ ಲಾರಾ ವೊಲ್ವಾರ್ಡ್ರ (68) ಅರ್ಧಶತಕ, ಗಾರ್ಡ್ನರ್ರ (41) ಹೋರಾಟದ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 188 ರನ್ ಬೃಹತ್ ಮೊತ್ತ ಪೇರಿಸಿತು. ಆರ್‌ಸಿಬಿ ಪರ ಶ್ರೆಯಾಂಕ ಪಾಟಿಲ್ 2 ವಿಕೆಟ್ ಪಡೆದರು.
Published On - 9:17 am, Sun, 19 March 23