
ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಂದ ಆಸ್ಟ್ರೇಲಿಯಾ ತಂಡಕ್ಕೆ ಇದುವರೆಗೆ ಒಂದೂ ಶುಭಸುದ್ದಿ ಸಿಕ್ಕಿಲ್ಲ. ನಾಗ್ಪುರ ಹಾಗೂ ದೆಹಲಿಯಲ್ಲಿ ನಡೆದ ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗರೂ ಪಡೆ ಟ್ರೋಫಿಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇನ್ನೇನಿದ್ದರು ಕನಿಷ್ಠ ಸಮಬಲಕ್ಕೆ ಹೋರಾಟ ನಡೆಸಬೇಕಿದೆ.

ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಸಮಬಲ ಸಾಧಿಸಬೇಕು ಎಂದರೆ ಉಳಿದಿರುವ ಎರಡೂ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಕೂಡ ಶುರು ಮಾಡಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್ನಲ್ಲಿ ಶುರುವಾಗಲಿದೆ. ಆದರೆ, ಆಸೀಸ್ ತಂಡದ ಆಟಗಾರರು ಇನ್ನೂ ಡೆಲ್ಲಿಯಲ್ಲೇ ನೆಲೆಸಿದ್ದಾರೆ. ದ್ವಿತೀಯ ಟೆಸ್ಟ್ ನಡೆದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬ್ಯಾಟಿಂಗ್-ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ನಾಲ್ಕರಿಂದ ಐದು ಗಂಟೆಗಳ ಕಾಲ ಆಸೀಸ್ ಪ್ಲೇಯರ್ಸ್ ನೆಟ್ನಲ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿದ್ದು ಭಾನುವಾರ ಇಂದೋರ್ಗೆ ಹೊರಡಲಿದ್ದಾರೆ.

ಇತ್ತ ಟೀಮ್ ಇಂಡಿಯಾ ಪ್ಲೇಯರ್ಸ್ ಎರಡನೇ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಮನೆಗೆ ತೆರಳಿದ್ದರು. ಇವರು ಇಂದು ಇಂದೋರ್ಗೆ ತಲುಪಿ ನಾಳೆಯಿಂದ ಅಭ್ಯಾಸ ಶುರು ಮಾಡಲಿದ್ದಾರೆ.

ಮೂರನೇ ಹಾಗೂ ನಾಲ್ಕನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವ್ ಸ್ಮಿತ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಪ್ಯಾಟ್ ಕಮಿನ್ಸ್ ಇಡೀ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು ತಾಯಿಯ ಆರೋಗ್ಯ ಹದಗೆಟ್ಟಿರುವುದರಿಂದ ಭಾರತಕ್ಕೆ ಮರಳಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು ಮೊಣಕೈ ಸಮಸ್ಯೆಯಿಂದಾಗಿ ಈಗಾಗಲೇ ಡೇವಿಡ್ ವಾರ್ನರ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇವರೊಂದಿಗೆ ಹ್ಯಾಜಲ್‌ವುಡ್ ಕೂಡ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಮ್ಯಾಥ್ಯೂ ರೆನ್ಶಾ ಕೂಡ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಆಷ್ಟನ್ ಅಗರ್ ಕೂಡ ಅಲಭ್ಯರಾಗಿದ್ದಾರೆ.