
ವಿಶಾಖಪಟ್ಟಣದಲ್ಲಿ ನಡೆದ ಭಾರತದ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿದೆ. ಟೀಮ್ ಇಂಡಿಯಾ ನೀಡಿದ ಸುಲಭ ಗುರಿಯನ್ನು ಬೆನ್ನತ್ತಿದ ಆಸೀಸ್ ಪಡೆಯು ಕೇವಲ 11 ಓವರ್ಗಳಲ್ಲಿ ಪಂದ್ಯ ಮುಗಿಸಿ ವಿಶೇಷ ದಾಖಲೆಯನ್ನು ಬರೆದಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಹುಸಿಗೊಳಿಸದಂತೆ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಉರುಳಿಸುವ ಮೂಲಕ ಟೀಮ್ ಇಂಡಿಯಾವನ್ನು ಕೇವಲ 117 ರನ್ಗಳಿಗೆ ಆಲೌಟ್ ಮಾಡಿದರು.

118 ರನ್ಗಳ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಟ್ರಾವಿಸ್ ಹೆಡ್ (51) ಹಾಗೂ ಮಿಚೆಲ್ ಮಾರ್ಷ್ (66) ಸ್ಪೋಟಕ ಆರಂಭ ಒದಗಿಸಿದ್ದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಭಾರತೀಯ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 11 ಓವರ್ಗಳಲ್ಲಿ 121 ರನ್ ಬಾರಿಸಿ ಆಸ್ಟ್ರೇಲಿಯಾ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಈ ಹತ್ತು ವಿಕೆಟ್ಗಳ ವಿಜಯದೊಂದಿಗೆ ಆಸ್ಟ್ರೇಲಿಯಾ ತಂಡವು ವಿಶೇಷ ದಾಖಲೆಯನ್ನು ಕೂಡ ನಿರ್ಮಿಸಿತು. ಹೌದು, ಇದು ಆಸ್ಟ್ರೇಲಿಯಾ ತಂಡ ಏಕದಿನ ಕ್ರಿಕೆಟ್ನಲ್ಲಿ ಸಾಧಿಸಿದ ಅತ್ಯುತ್ತಮ ಗೆಲುವುಗಳಲ್ಲಿ ಒಂದಾಗಿದೆ. ಇದಕ್ಕೂ ಮುನ್ನ ಆಸೀಸ್ ಪಡೆ ವಿಕೆಟ್ ನಷ್ಟವಿಲ್ಲದೆ ಕಡಿಮೆ ಓವರ್ನಲ್ಲಿ ಚೇಸ್ ಮಾಡಿದ್ದು ಇಂಗ್ಲೆಂಡ್ ವಿರುದ್ಧ.

2003 ರಲ್ಲಿ ಇಂಗ್ಲೆಂಡ್ ವಿರುದ್ಧ 12.2 ಓವರ್ಗಳಲ್ಲಿ 118 ರನ್ ಚೇಸ್ ಮಾಡುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ಟೀಮ್ ಇಂಡಿಯಾ ವಿರುದ್ಧ ಕೇವಲ 11 ಓವರ್ಗಳಲ್ಲಿ ಗೆಲುವು ದಾಖಲಿಸಿದೆ.

ಭಾರತದ ವಿರುದ್ಧ ಕೇವಲ 66 ಎಸೆತಗಳಲ್ಲಿ 121 ರನ್ ಚಚ್ಚುವ ಮೂಲಕ ಆಸ್ಟ್ರೇಲಿಯಾ ತಂಡವು ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ಸಾಧಿಸಿದೆ. ಇದು ಏಕದಿನ ಕ್ರಿಕೆಟ್ನಲ್ಲಿ ಆಸೀಸ್ ಪಡೆ ವಿಕೆಟ್ ನಷ್ಟವಿಲ್ಲದೆ ದಾಖಲಿಸಿದ ಅತ್ಯುತ್ತಮ ಗೆಲುವು ಎಂಬುದೇ ವಿಶೇಷ.