ಬಹುನಿರೀಕ್ಷಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ದೊರಕಿದ್ದು, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿದೆ. ಇಂದು ಪಾಕಿಸ್ತಾನ-ನೆದರ್ಲೆಂಡ್ಸ್ ತಂಡ ಮುಖಾಮುಖಿ ಆಗಲಿದೆ. ಭಾರತ ಕ್ರಿಕೆಟ್ ತಂಡ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
10 ವರ್ಷಗಳಲ್ಲಿ ತಮ್ಮ ಮೊದಲ ಐಸಿಸಿ ಟ್ರೋಫಿಯನ್ನು ಗೆಲ್ಲುವ ಇರಾದೆಯೊಂದಿಗೆ ರೋಹಿತ್ ಪಡೆ ಕಣಕ್ಕಿಳಿಯುತ್ತಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಮೂಲಗಳಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಭಾರತ ತಂಡಕ್ಕೆ ಅಚ್ಚರಿ ಎಂಬಂತೆ ಸೇರಿಕೊಂಡ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರಂತೆ.
ಗಾಯಾಳು ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಭಾರತ ತಂಡ ಸೇರಿಸಿಕೊಂಡು ಕೊನೆಯ ಕ್ಷಣದಲ್ಲಿ ಬದಲಾವಣೆಯನ್ನು ಮಾಡಿತ್ತು. ಈಗ, ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದ ಪ್ಲೇಯಿಂಗ್ XI ನ ಭಾಗವಾಗಿರುತ್ತಾರೆ ಎಂದು ಹೇಳಲಾಗಿದೆ.
ಇದಕ್ಕಾಗಿ ಅಶ್ವಿನ್ ಅವರು ಸತತವಾಗಿ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಚೆನ್ನೈನ ತರಬೇತಿ ಅವಧಿಯಲ್ಲಿ, ರವಿಚಂದ್ರನ್ ಅಶ್ವಿನ್ ವ್ಯಾಯಾಮ ಮಾಡುವ ಜೊತೆಗೆ ನೆಟ್‌ನಲ್ಲಿ ಸಾಕಷ್ಟು ಸಮಯ ಬ್ಯಾಟಿಂಗ್ ಮಾಡಿ ಸಮಯವನ್ನು ಕಳೆಯುತ್ತಿದ್ದರು. ಪಿಟಿಐ ವರದಿಯ ಪ್ರಕಾರ, ಅಶ್ವಿನ್ 8 ನೇ ಸ್ಥಾನದಲ್ಲಿ ಶಾರ್ದೂಲ್ ಠಾಕೂರ್ ಬದಲು ಕಣಕ್ಕಿಳಿಯಲಿದ್ದಾರಂತೆ.
ಇದಕ್ಕೆ ಕಾರಣ ಕೂಡ ಇದೆ. ಆಸೀಸ್ ವಿರುದ್ಧ ಅಶ್ವಿನ್ ಉತ್ತಮ ದಾಖಲೆ ಹೊಂದಿದ್ದಾರೆ. ಅಲ್ಲದೆ ಚೆಪಾಕ್‌ನಂತಹ ಸ್ಪಿನ್-ಸ್ನೇಹಿ ಟ್ರ್ಯಾಕ್‌ನಲ್ಲಿ, ಅಶ್ವಿನ್ ಮಾರಕವಾಗಬಹುದು. ಅಶ್ವಿನ್ ಉತ್ತಮ ಬ್ಯಾಟರ್ ಕೂಡ ಆಗಿದ್ದು, ವಿಶೇಷವಾಗಿ ತವರಿನ ಪರಿಸ್ಥಿತಿಗಳಲ್ಲಿ 8 ನೇ ಸ್ಥಾನದಲ್ಲಿ ಕೊಡುಗೆ ನೀಡಬಹುದು.
ಏಷ್ಯಾಕಪ್ 2023 ರ ಫೈನಲ್‌ಗೆ ಮೊದಲು ಅಕ್ಷರ್ ಪಟೇಲ್ ಗಾಯಗೊಂಡಿದ್ದರಿಂದ 2023 ರ ವಿಶ್ವಕಪ್‌ಗೆ ಹಾಗೂ ಆಸೀಸ್ ವಿರದ್ಧದ ಏಕದಿನ ಸರಣಿಗೆ ಅಶ್ವಿನ್ ಅವರನ್ನು ತಂಡದಲ್ಲಿ ಸೇರಿಸಲಾಯಿತು. 20 ತಿಂಗಳ ನಂತರ ಫಾರ್ಮ್‌ಗೆ ಮರಳಿದ ಅಶ್ವಿನ್ 2ನೇ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್.