ಕೌಟುಂಬಿಕ ಕಲಹದಿಂದಾಗಿ ವರ್ಷಗಳಿಂದ ದೂರ ದೂರ ಇದ್ದ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಮತ್ತು ಪತ್ನಿ ಆಯೇಷಾ ಮುಖರ್ಜಿ ಇಂದು ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ದೆಹಲಿಯ ಪಟಿಯಾಲ ಹೌಸ್ ಕಾಂಪ್ಲೆಕ್ಸ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ.
ವರ್ಷಗಟ್ಟಲೆ ತಂದೆ ಮತ್ತು ಮಗನನ್ನು ದೂರವಿರಿಸಿ ಕ್ರಿಕೆಟಿಗ ಶಿಖರ್ ಧವನ್ ಮಾನಸಿಕ ಯಾತನೆ ಅನುಭವಿಸುವಂತೆ ಪತ್ನಿ ಆಯೇಷಾ ಮುಖರ್ಜಿ ಮಾಡಿದ್ದಾರೆ ಎಂದು ನ್ಯಾಯಾಧೀಶ ಹರೀಶ್ ಕುಮಾರ್ ಅವರು ಪರಿಗಣಿಸಿ ವಿಚ್ಛೇದನಕ್ಕೆ ಅನುಮೋದನೆ ನೀಡಿದ್ದಾರೆ.
2012 ರಲ್ಲಿ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆಯೇಷಾ ಅವರಿಗೆ ಇದು ಎರಡನೇ ಮದುವೆ ಆಗಿತ್ತು. ಈ ಇಬ್ಬರು ದಂಪತಿಗಳಿಗೆ ಓರ್ವ ಮಗನಿದ್ದು, ಮಗನ ಖಾಯಂ ಕಸ್ಟಡಿಯ ಕುರಿತು ಯಾವುದೇ ಆದೇಶವನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ.
ಪ್ರಸ್ತುತ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಈ ಇಬ್ಬರ ಪ್ರೇಮ್ ಕಹಾನಿ ಮಾತ್ರ ತುಂಬಾ ಕುತೂಹಲಕಾರಿಯಾಗಿದೆ. ವಾಸ್ತವವಾಗಿ ಈ ಇಬ್ಬರ ನಡುವೆ ಪ್ರೀತಿ ಮೂಡಲು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಶಿಖರ್ ಧವನ್ ಸಹ ಆಟಗಾರ ಹರ್ಭಜನ್ ಸಿಂಗ್ ಕಾರಣ.
ಹರ್ಭಜನ್ ಸಿಂಗ್ ಅವರ ಫೇಸ್‌ಬುಕ್ ಫ್ರೆಂಡ್ ಲಿಸ್ಟ್‌ನಲ್ಲಿ ಆಯೇಷಾರನ್ನು ನೋಡಿದ ಶಿಖರ್ ಧವನ್, ಫೋಟೋವನ್ನು ನೋಡಿದ ತಕ್ಷಣ ಆಯೇಷಾರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದಾದ ನಂತರ ಶಿಖರ್ ಆಯೇಷಾಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು.
ಬಳಿಕ ಇಬ್ಬರಿಬ್ಬರ ನಡುವೆ ಮಾತುಕತೆ ಶುರುವಾಗಿದ್ದು, ಫೇಸ್ ಬುಕ್ನಲ್ಲಿಯೇ ಇಬ್ಬರಿಗೂ ಪ್ರೀತಿ ಹುಟ್ಟಿಕೊಂಡಿದೆ. ಬಳಿಕ2009ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಇಬ್ಬರು ಇದಾದ ಬಳಿಕ ಧವನ್ 2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಇದು ಶಿಖರ್ ಅವರ ಮೊದಲ ಮದುವೆಯಾಗಿದ್ದರೆ, ಆಯೇಷಾ ಅವರಿಗೆ ಎರಡನೇ ಮದುವೆಯಾಗಿತ್ತು. ಆಸ್ಟ್ರೇಲಿಯಾದ ಉದ್ಯಮಿಯೊಂದಿಗೆ ಆಯೇಷಾ ಮೊದಲ ಮದುವೆಯಾಗಿದ್ದರು. ಆದರೆ ಈ ಸಂಬಂಧ ಮುರಿದುಬಿದ್ದಿತ್ತು.
ಆಯೇಷಾ ಮತ್ತು ಅವರ ಮೊದಲ ಪತಿಗೆ ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಶಿಖರ್ ಮತ್ತು ಆಯೇಷಾ ದಂಪತಿಗೆ ಜೋರಾವರ್ ಎಂಬ ಮಗನಿದ್ದಾನೆ.
ಆಯೇಷಾ ಮುಖರ್ಜಿ ಮೂಲತಃ ಆಂಗ್ಲೋ-ಇಂಡಿಯನ್. ಇವರ ತಂದೆ ಭಾರತೀಯರಾದರೆ ತಾಯಿ ಬ್ರಿಟಿಷ್ ಮೂಲದವರಾಗಿದ್ದಾರೆ. ಆಯೇಷಾ ಮೆಲ್ಬೋರ್ನ್ ಕಿಕ್ ಬಾಕ್ಸರ್ ಕೂಡ ಆಗಿದ್ದಾರೆ. ಅವರು ಯಶಸ್ವಿ ಕಿಕ್ ಬಾಕ್ಸರ್ ಆಗಿದ್ದು, ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಖ್ಯಾತಿ ಹೊಂದಿದ್ದಾರೆ.
Published On - 10:57 am, Thu, 5 October 23