
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಸರಣಿಯ ಮೂರನೇ ಪಂದ್ಯ ಫೆಬ್ರವರಿ 15 ರಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ 100ನೇ ಪಂದ್ಯವನ್ನಾಡಿದ ದಾಖಲೆ ಬರೆಯಲಿದ್ದಾರೆ.

ಈ ಮೂಲಕ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ 100 ಕ್ಕೂ ಅಧಿಕ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರರ ಪಟ್ಟಿಗೆ ಸೇರಲಿದ್ದಾರೆ.

ಇದುವರೆಗೆ ಟೆಸ್ಟ್ನಲ್ಲಿ 99 ಪಂದ್ಯಗಳನ್ನಾಡಿರುವ 32ರ ಹರೆಯದ ಸ್ಟೋಕ್ಸ್ಗೆ ಫೆಬ್ರವರಿ 15ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಅವರ ವೃತ್ತಿಜೀವನದ 100ನೇ ಟೆಸ್ಟ್ ಆಗಲಿದೆ. ಇದು ಸಾಧ್ಯವಾದರೆ ಸ್ಟೋಕ್ಸ್, ಕ್ರಿಕೆಟ್ ಇತಿಹಾಸದಲ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡಿದ 74 ನೇ ಕ್ರಿಕೆಟಿಗ ಹಾಗೂ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 16ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟೋಕ್ಸ್ ಪ್ರದರ್ಶನವನ್ನು ನೋಡುವುದಾದರೆ.. 2013 ರಲ್ಲಿ ರೆಡ್ ಬಾಲ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸ್ಟೋಕ್ಸ್, ಆಡಿರುವ99 ಟೆಸ್ಟ್ ಪಂದ್ಯಗಳಲ್ಲಿ 36.3 ರ ಸರಾಸರಿಯಲ್ಲಿ 6251 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕ ಮತ್ತು 31 ಅರ್ಧ ಶತಕಗಳು ಸೇರಿವೆ.

ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮ್ಯಾಜಿಕ್ ಮಾಡಿರುವ ಸ್ಟೋಕ್ಸ್, 32.07 ಸರಾಸರಿಯಲ್ಲಿ 197 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂದು ವೇಳೆ ರಾಜ್‌ಕೋಟ್ ಟೆಸ್ಟ್ನಲ್ಲಿ ಸ್ಟೋಕ್ಸ್ ಬೌಲಿಂಗ್ನಲ್ಲಿ ಮೂರು ವಿಕೆಟ್ ಪಡೆದರೆ 200 ವಿಕೆಟ್‌ಗಳನ್ನು ಪೂರೈಸಲಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ 200 ಟೆಸ್ಟ್ ವಿಕೆಟ್ ಪಡೆದ 16 ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಟೆಸ್ಟ್ ಜೊತೆಗೆ ಉಳಿದೆರಡು ಮಾದರಿಗಳಲ್ಲೂ ಇಂಗ್ಲೆಂಡ್ ಪರ ಆಲ್‌ರೌಂಡರ್ ಪ್ರದರ್ಶನ ನೀಡಿರುವ ಸ್ಟೋಕ್ಸ್, 114 ಏಕದಿನ ಪಂದ್ಯ ಮತ್ತು 43 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಸ್ಟೋಕ್ಸ್, ಇಂಗ್ಲೆಂಡ್ ಗೆದ್ದ 2019 ರ ಏಕದಿನ ವಿಶ್ವಕಪ್ ಮತ್ತು 2022 ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದರು.