ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಪಡೆದ ರವೀಂದ್ರ ಜಡೇಜಾ ದೊಡ್ಡ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಟಾಮ್ ಹಾರ್ಟ್ಲಿ ಅವರ ವಿಕೆಟ್ ಪಡೆದ ರವೀಂದ್ರ ಜಡೇಜಾ ಭಾರತದ ನೆಲದಲ್ಲಿ ತಮ್ಮ 200 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ್ದಾರೆ. ಈ ಮೂಲಕ ಭಾರತದ ನೆಲದಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಐದನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಜಡೇಜಾಗಿಂತ ಮೊದಲು ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್ ಮತ್ತು ಕಪಿಲ್ ದೇವ್ ಈ ಸಾಧನೆ ಮಾಡಿದ್ದರು. ಇದೀಗ ಈ ದಿಗ್ಗಜ ಆಟಗಾರರ ಕ್ಲಬ್ಗೆ ಜಡೇಜಾ ಸೇರಿಕೊಂಡಿದ್ದಾರೆ.
ಭಾರತದ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ 350 ವಿಕೆಟ್‌ಗಳನ್ನು ಪಡೆದಿದ್ದಾರೆ.
ಎರಡನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ 347 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಈ ಪಂದ್ಯದಲ್ಲೇ ಅಶ್ವಿನ್ 500 ಟೆಸ್ಟ್ ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದರು.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಹರ್ಭಜನ್ ಸಿಂಗ್ 265 ವಿಕೆಟ್ ಪಡೆದಿದ್ದರೆ, 219 ವಿಕೆಟ್ಗಳೊಂದಿಗೆ 1983 ವಿಶ್ವಕಪ್ ಹೀರೋ ಕಪಿಲ್ ದೇವ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇದೀಗ ಈ ಪಟ್ಟಿಗೆ ಸೇರ್ಪಡೆಗೊಂಡಿರುವ ರವೀಂದ್ರ ಜಡೇಜಾ 201 ವಿಕೆಟ್ ಉರುಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮ್ಯಾಜಿಕ್ ಮಾಡಿರುವ ಜಡೇಜಾ ಈ ಪಂದ್ಯದಲ್ಲಿ 112 ರನ್‌ಗಳ ಇನಿಂಗ್ಸ್ ಸಹ ಆಡಿದ್ದರು.
2012ರಲ್ಲಿ ಭಾರತ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಜಡೇಜಾ ಅಂದಿನಿಂದ ಟೀಮ್ ಇಂಡಿಯಾ ಪರ 70 ಟೆಸ್ಟ್ ಪಂದ್ಯಗಳಲ್ಲಿ 3005 ರನ್ ಗಳಿಸಿದ್ದಾರೆ ಮತ್ತು 282 ವಿಕೆಟ್ಗಳನ್ನು ಪಡೆದಿದ್ದಾರೆ.