ಭಾರತ ಮತ್ತು ಇಂಗ್ಲೆಂಡ್ ನಡುವೆ ರಾಜ್‌ಕೋಟ್‌ನಲ್ಲಿ ಮೂರನೇ ಟಿ20 ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಆತಿಥೇಯ ಭಾರತಕ್ಕೆ 172 ರನ್ಗಳ ಟಾರ್ಗೆಟ್ ನೀಡಿದೆ. ಇಂಗ್ಲೆಂಡ್ ಪರ ಬೆನ್ ಡಕೆಟ್ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಇತ್ತ ಭಾರತದ ಪರ ವರುಣ್ ಚಕ್ರವರ್ತಿ ಐದು ವಿಕೆಟ್ಗಳ ಗೊಂಚಲು ಪಡೆದರು.
ರಾಜ್‌ಕೋಟ್ ಟಿ20ಯಲ್ಲಿ ವರುಣ್ ಚಕ್ರವರ್ತಿ ಏಕಾಂಗಿಯಾಗಿ ಇಂಗ್ಲೆಂಡ್ ತಂಡದ ಅರ್ಧದಷ್ಟು ಆಟಗಾರರನ್ನು ಪೆವಿಲಿಯನ್ಗಟ್ಟುವಲ್ಲಿ ಯಶಸ್ವಿಯಾದರು. ವರುಣ್ ತಮ್ಮ ಖೋಟಾದ 4 ಓವರ್‌ಗಳಲ್ಲಿ ಕೇವಲ 24 ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಈ ಟಿ20 ಸರಣಿಯಲ್ಲಿ ವರುಣ್ ಇದುವರೆಗೆ ಒಟ್ಟು 10 ವಿಕೆಟ್ ಉರುಳಿಸಿದ್ದು, ಇದರೊಂದಿಗೆ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.
ವರುಣ್ ಚಕ್ರವರ್ತಿ ಇಂಗ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಕೋಲ್ಕತ್ತಾ ಟಿ20ಯಲ್ಲಿ 23 ರನ್ ನೀಡಿ 3 ವಿಕೆಟ್ ಕಬಳಿಸಿದ್ದರೆ, ಚೆನ್ನೈನಲ್ಲಿ 2 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈಗ ರಾಜ್‌ಕೋಟ್‌ನಲ್ಲಿ ಮಾರಕ ದಾಳಿ ನಡೆಸಿದ ವರುಣ್ 5 ವಿಕೆಟ್‌ಗಳನ್ನು ಪಡೆಯುವ ಮೂಲಕ 10 ವಿಕೆಟ್‌ಗಳನ್ನು ಪೂರೈಸಿದರು.
ಈ ಮೂಲಕ ವರುಣ್ ಚಕ್ರವರ್ತಿ ಎರಡು ಟಿ20 ಸರಣಿಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವರುಣ್, ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯಲ್ಲಿ 12 ವಿಕೆಟ್ ಕಬಳಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧವೂ 10 ವಿಕೆಟ್ ಪಡೆದಿದ್ದಾರೆ.
ಇದಲ್ಲದೆ ವರುಣ್ ಚಕ್ರವರ್ತಿ ಟೀಂ ಇಂಡಿಯಾದಲ್ಲಿ ಅದ್ಭುತ ಪುನರಾಗಮನ ಮಾಡಿದ್ದಾರೆ. ಚಕ್ರವರ್ತಿ ಮೊದಲ 6 ಟಿ20 ಪಂದ್ಯಗಳಲ್ಲಿ ಕೇವಲ 2 ವಿಕೆಟ್ಗಳನ್ನಷ್ಟೇ ಪಡೆದಿದ್ದರು. ಆ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ಭರ್ಜರಿ ಕಂಬ್ಯಾಕ್ ಮಾಡಿರುವ ವರುಣ್, ಆಡಿರುವ 10 ಟಿ20 ಪಂದ್ಯಗಳಲ್ಲಿ 27 ವಿಕೆಟ್ಗಳನ್ನು ಪಡೆದಿದ್ದಾರೆ.