
ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆ ಬಳಿಕ ಮೂರು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರರು ವಿಶ್ರಾಂತಿ ಪಡೆಯಲ್ಲಿದ್ದು ಯುವ ಪಡೆಯನ್ನು ಕಳುಹಿಸಲು ಬಿಸಿಸಿಐ ಚಿಂತಿಸಿದೆ.

ಈ ಹಿಂದೆ ಐರ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂಬ ಮಾಹಿತಿ ಹರಿದಾಡಿತ್ತು. ಆದರೆ ಈ ಪ್ರವಾಸದಿಂದ ಪಾಂಡ್ಯಗೂ ವಿಶ್ರಾಂತಿ ನೀಡಲಾಗುತ್ತಿದ್ದು, ಅವರ ಉಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ಗೆ ತಂಡದ ಸಾರಥ್ಯವಹಿಸುವ ಮಾತುಗಳು ಕೇಳಿಬರುತ್ತಿವೆ.

ಹೀಗಾಗಿ ವಿಶ್ವದ ನಂ.1 ಟಿ20 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರು ಮೆನ್ ಇನ್ ಬ್ಲೂ ತಂಡದ ನಾಯಕತ್ವವನ್ನು ವಹಿಸಲಿದ್ದಾರೆ ಎಂದು ಈ ಹಿಂದೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ ತಿಂಗಳುಗಳ ನಂತರ ಬುಮ್ರಾ ತಂಡಕ್ಕೆ ಮರಳುವುದು ಖಚಿತ ಎಂದೂ ಹೇಳಲಾಗುತ್ತಿದ್ದರೂ, ಅವರಿಗೆ ನಾಯಕತ್ವ ನೀಡುವ ಸಂಭವ ಕಡಿಮೆ ಎಂದು ಹೇಳಲಾಗುತ್ತಿದೆ. ಐರ್ಲೆಂಡ್ ಪ್ರವಾಸದಲ್ಲಿ ಬುಮ್ರಾ ತಮ್ಮ ಹಳೆಯ ಲಯಕ್ಕೆ ಮರಳಿದರೆ, ಆ ಬಳಿಕ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

ಹಾರ್ದಿಕ್ ಪಾಂಡ್ಯ ಜೊತೆಗೆ ಶುಭ್ಮನ್ ಗಿಲ್ ಕೂಡ ಐರ್ಲೆಂಡ್ ಪ್ರವಾಸಕ್ಕೆ ಲಭ್ಯರಿಲ್ಲ. ಮುಂಬರುವ ತಿಂಗಳುಗಳಲ್ಲಿ ತಂಡವು ಸಾಕಷ್ಟು ಕ್ರಿಕೆಟ್ ಆಡುವ ಕಾರಣ ಕೆಲಸದ ಹೊರೆ ಕಡಿಮೆ ಮಾಡುವ ಸಲುವಾಗಿ ಬಿಸಿಸಿಐ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಮುಂದಾಗಿದೆ. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ಮೂರು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್‌ಗೆ ಪ್ರಯಾಣಿಸಲಿರುವ ಟೀಂ ಇಂಡಿಯಾ, ಆ ನಂತರ ಆಗಸ್ಟ್ 30 ರಿಂದ ಏಷ್ಯಾಕಪ್ನಲ್ಲಿ ಭಾಗವಹಿಸಲಿದೆ.