ಭಾರತ ತಂಡ ವಿಶ್ವಕಪ್ ಗೆಲುವಿನ ಅಭಿಯಾನವನ್ನು ಮುಂದುವರೆಸಿದೆ. ಸತತ 8 ಗೆಲುವನ್ನು ದಾಖಲಿಸಿದ ನಂತರ, ನೆದರ್ಲೆಂಡ್ಸ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಆಡಿದ ಟೀಂ ಇಂಡಿಯಾ 160 ರನ್‌ಗಳ ದೊಡ್ಡ ಗೆಲುವಿನೊಂದಿಗೆ ಲೀಗ್ ಹಂತವನ್ನು ಪೂರ್ಣಗೊಳಿಸಿದೆ.
ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರ ಸ್ಫೋಟಕ ಶತಕದ ಆಧಾರದ ಮೇಲೆ ಭಾರತ 4 ವಿಕೆಟ್‌ಗೆ 410 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಪ್ರತ್ಯುತ್ತರವಾಗಿ ನೆದರ್ಲೆಂಡ್ಸ್ ಹೋರಾಟ ನೀಡಲು ಪ್ರಯತ್ನಿಸಿದರೂ ಇಡೀ ತಂಡ 250 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಒಂದಲ್ಲ ಎರಡಲ್ಲ ಬರೋಬ್ಬರಿ 9 ಬೌಲರ್‌ಗಳಿಗೆ ಅವಕಾಶ ನೀಡಿದ್ದು, ಅದರಲ್ಲಿ ಅವರೂ ಸಹ ಸೇರಿದ್ದಾರೆ.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ನೆದರ್ಲ್ಯಾಂಡ್ಸ್ ವಿರುದ್ಧ ಬೌಲಿಂಗ್ ಮಾಡಿದರು. ಇದರಲ್ಲಿ ಯಾರ್ಯಾರು ಎಷ್ಟು ಓವರ್ ಬೌಲ್ ಮಾಡಿ, ಎಷ್ಟು ರನ್ ಬಿಟ್ಟುಕೊಟ್ಟರು ಎಂಬ ವಿವರ ಇಲ್ಲಿದೆ.
ಭಾರತದ ಪರ ಬೌಲಿಂಗ್ ದಾಳಿ ಆರಂಭಿಸಿದ ಜಸ್ಪ್ರೀತ್ ಬುಮ್ರಾ 1 ಮೇಡನ್ ಓವರ್ ಸೇರಿದಂತೆ ಒಟ್ಟು 9 ಓವರ್ ಬೌಲ್ ಮಾಡಿ 33 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಎರಡನೇ ವೇಗಿಯಾಗಿ ದಾಳಿಗಿಳಿದ ಮೊಹಮ್ಮದ್ ಸಿರಾಜ್ 1 ಮೇಡನ್ ಓವರ್ ಸೇರಿದಂತೆ ಒಟ್ಟು 6 ಓವರ್ ಬೌಲ್ ಮಾಡಿ 29 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಕಳೆದ ಪಂದ್ಯಗಳಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್ ಟೇಕರ್ ಬೌಲರ್ ಎನಿಸಿಕೊಂಡಿದ್ದ ಶಮಿಗೆ ಈ ಪಂದ್ಯದಲ್ಲಿ ವಿಶೇಷವಾಗಿ ಏನ್ನನ್ನು ಮಾಡಲು ಸಾಧ್ಯವಾಗಲಿಲ್ಲ. ಶಮಿ ಈ ಪಂದ್ಯದಲ್ಲಿ 6 ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ 41 ರನ್ ಬಿಟ್ಟುಕೊಟ್ಟರು.
ಕುಲ್ದೀಪ್ ಯಾದವ್ ತಮ್ಮ ಖೋಟಾದ 10 ಓವರ್ ಬೌಲ್ ಮಾಡಿ 1 ಮೇಡನ್ ಓವರ್ ಸೇರಿದಂತೆ 41 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ರವೀಂದ್ರ ಜಡೇಜಾ ಕೂಡ ತಮ್ಮ ಖೋಟಾದ 9 ಓವರ್ ಬೌಲ್ ಮಾಡಿ 49 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಬರೋಬ್ಬರಿ 6 ವರ್ಷಗಳ ಬಳಿಕ ಏಕದಿನ ವಿಶ್ವಕಪ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ಕೊಹ್ಲಿ, 3 ಓವರ್ ಬೌಲ್ ಮಾಡಿ 13 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು.
ತಲಾ ಎರಡೆರಡು ಓವರ್ ಬೌಲ್ ಮಾಡಿದ ಸೂರ್ಯಕುಮಾರ್ ಯಾದವ್ ಹಾಗೂ ಶುಭ್ಮನ್ ಗಿಲ್ ಯಾವುದೇ ವಿಕೆಟ್ ಪಡೆಯದೆ ಕ್ರಮವಾಗಿ 17 ಹಾಗೂ 13 ರನ್ ಬಿಟ್ಟುಕೊಟ್ಟರು.
ಕೊನೆಯದಾಗಿ ದಾಳಿಗಿಳಿದ ರೋಹಿತ್ ಶರ್ಮಾ ನೆದರ್ಲೆಂಡ್ಸ್ ಪರ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ತೇಜ ನಿಡುಮನೂರು ವಿಕೆಟ್ ಪಡೆದರು. ರೋಹಿತ್ ಕೇವಲ 5 ಎಸೆತ ಬೌಲ್ ಮಾಡಿ ವಿಕೆಟ್ ಜೊತೆಗೆ 7 ರನ್ ಬಿಟ್ಟುಕೊಟ್ಟರು.