
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 4ನೇ ಟಿ20 ಪಂದ್ಯ ಇಂದು (ಜ.28) ನಡೆಯಲಿದೆ. ವಿಶಾಖಪಟ್ಟಣದ ಎಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಿಂದ ಟೀಮ್ ಇಂಡಿಯಾದ ಕೆಲ ಆಟಗಾರರು ಹೊರಗುಳಿಯುವ ಸಾಧ್ಯತೆಯಿದೆ. ಅದರಲ್ಲೂ ಪ್ರಮುಖ ಆಟಗಾರನೋರ್ವನಿಗೆ ವಿಶ್ರಾಂತಿ ನೀಡುವುದು ಖಚಿತ.

ಹೌದು, ಟೀಮ್ ಇಂಡಿಯಾ ಪರ ಕಳೆದ ಮೂರು ಮ್ಯಾಚ್ಗಳಲ್ಲೂ ಕಣಕ್ಕಿಳಿದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಪಾಂಡ್ಯಗೆ ವಿಶ್ರಾಂತಿ ನೀಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ಹೊರಗುಳಿದರೆ ಫಿಟ್ನೆಸ್ ಸಮಸ್ಯೆಯ ಕಾರಣ ಕಳೆದೆರಡು ಪಂದ್ಯಗಳಲ್ಲಿ ಕಣಕ್ಕಿಳಿಯದ ಅಕ್ಷರ್ ಪಟೇಲ್ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಇನ್ನು ಅಕ್ಷರ್ ಪಟೇಲ್ ಈ ಪಂದ್ಯಕ್ಕೂ ಫಿಟ್ ಆಗಿರದೇ ಇದ್ದರೆ ಶ್ರೇಯಸ್ ಅಯ್ಯರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಇನ್ನು ಈ ಪಂದ್ಯದಿಂದ ಹರ್ಷಿತ್ ರಾಣಾ ಕೂಡ ಹೊರಗುಳಿದರೆ ಅಚ್ಚರಿಪಡಬೇಕಿಲ್ಲ. ಏಕೆಂದರೆ ಕಳೆದ ಪಂದ್ಯದ ವೇಳೆ ಅರ್ಷದೀಪ್ ಸಿಂಗ್ಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಿದ ಹರ್ಷಿತ್ಗೆ ರೆಸ್ಟ್ ನೀಡುವ ಸಾಧ್ಯತೆಯಿದೆ. ಹಾಗೆಯೇ ರವಿ ಬಿಷ್ಣೋಯ್ ಬದಲಿಗೆ ಈ ಮ್ಯಾಚ್ನಲ್ಲಿ ವರುಣ್ ಚಕ್ರವರ್ತಿ ಮತ್ತೆ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ...

ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಅಕ್ಷರ್ ಪಟೇಲ್, ರಿಂಕು ಸಿಂಗ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್.