
ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 134 ಎಸೆತಗಳನ್ನು ಎದುರಿಸಿ ಕುಲ್ದೀಪ್ ಯಾದವ್ (Kuldeep Yadav) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಟೆಸ್ಟ್ ಸ್ಪೆಷಲಿಸ್ಟ್ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಗುವಾಹಟಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕುಲ್ದೀಪ್ ಯಾದವ್ ಬರೋಬ್ಬರಿ 134 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಅವರು ಕಲೆಹಾಕಿದ್ದು 19 ರನ್ಗಳು ಮಾತ್ರ. ಇದರೊಂದಿಗೆ ಹೋಮ್ ಟೆಸ್ಟ್ನಲ್ಲಿ 100 ಎಸೆತಗಳನ್ನು ಎದುರಿಸಿ ಅತೀ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎಂಬ ದಾಖಲೆ ಕುಲ್ದೀಪ್ ಯಾದವ್ ಪಾಲಾಯಿತು.

ಇದಕ್ಕೂ ಮುನ್ನ ಇಂತಹದೊಂದು ಅಸಲಿ ಟೆಸ್ಟ್ ಆಟ ಪ್ರದರ್ಶಿಸಿದ್ದು ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್. 2004 ರಲ್ಲಿ ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರಾಹುಲ್ ದ್ರಾವಿಡ್ ಬರೋಬ್ಬರಿ 140 ಎಸೆತಗಳನ್ನು ಎದುರಿಸಿ ಕೇವಲ 21 ರನ್ ಕಲೆಹಾಕಿದ್ದರು. ಈ ಮೂಲಕ ತವರಿನ ಟೆಸ್ಟ್ ಪಂದ್ಯದಲ್ಲಿ 100 ಎಸೆತಗಳನ್ನು ಎದುರಿಸಿ ಅತೀ ಕಡಿಮೆ ಸ್ಟ್ರೈಕ್ ಪ್ರದರ್ಶಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಕುಲ್ದೀಪ್ ಯಾದವ್ ಮುರಿದಿದ್ದಾರೆ. ಗುವಾಹಟಿಯಲ್ಲಿ ಸೌತ್ ಆಫ್ರಿಕಾ ಬೌಲರ್ಗಳನ್ನು ಕಾಡಿದ ಕುಲ್ದೀಪ್ ಬರೋಬ್ಬರಿ 134 ಎಸೆತಗಳನ್ನು ಎದುರಿಸಿ 14.17 ಸ್ಟ್ರೈಕ್ ರೇಟ್ನಲ್ಲಿ ಕೇವಲ 19 ರನ್ಗಳಿಸಿದ್ದಾರೆ. ಈ ಮೂಲಕ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 100 ಎಸೆತಗಳನ್ನು ಎದುರಿಸಿ ಅತೀ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇಲ್ಲಿ ಮತ್ತೊಂದು ಕುತೂಹಲಕಾರಿ ವಿಷಯ ಎಂದರೆ ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರನ್ನು ಹೊರತುಪಡಿಸಿ ಭಾರತದ ಯಾವುದೇ ಬ್ಯಾಟರ್ 100 ಎಸೆತಗಳನ್ನು ಎದುರಿಸಿಲ್ಲ ಎಂಬುದು. ಅಂದರೆ ಬೌಲರ್ ಕುಲ್ದೀಪ್ ಯಾದವ್ ಕ್ರೀಸ್ ಕಚ್ಚಿ ನಿಂತಿದ್ದರಿಂದ ಭಾರತ ತಂಡವು ಬೇಗನೆ ಆಲೌಟ್ ಆಗುವುದು ತಪ್ಪಿತು.