
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ಇಂದಿನಿಂದ ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಕೆಲ ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದಿಲ್ಲ. ಅಂದರೆ ಭಾರತ-ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಕೆಲ ಆಟಗಾರರು ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಆ ಆಟಗಾರರು ಯಾರೆಂದರೆ...

ಯಶಸ್ವಿ ಜೈಸ್ವಾಲ್: ಸೌತ್ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಸಹ ಟಿ20 ಸರಣಿಗೆ ಆಯ್ಕೆ ಮಾಡಿಲ್ಲ. ಹೀಗಾಗಿ ಜೈಸ್ವಾಲ್ ಕೂಡ ಮುಂಬರುವ 5 ಪಂದ್ಯಗಳ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಪ್ರಸಿದ್ಧ್ ಕೃಷ್ಣ: ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಸಹ ಟಿ20 ಸರಣಿಗೆ ಪರಿಗಣಿಸಲಾಗಿಲ್ಲ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ದುಬಾರಿಯಾಗಿದ್ದ ಪ್ರಸಿದ್ಧ್ ಕೃಷ್ಣ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದೆ. ಹೀಗಾಗಿ ಅವರು ಸಹ ಮುಂದಿನ ಸರಣಿಯಲ್ಲಿ ಕಣಕ್ಕಿಳಿಯುವುದಿಲ್ಲ.

ರಿಷಭ್ ಪಂತ್: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸೌತ್ ಆಫ್ರಿಕಾ ವಿರುದ್ಧದ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದಾಗ್ಯೂ ಅವರಿಗೆ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಟಿ20 ಸರಣಿಗೆ ಆಯ್ಕೆ ಮಾಡಲಾದ 15 ಸದಸ್ಯರುಗಳ ತಂಡದಲ್ಲಿ ರಿಷಭ್ಗೆ ಸ್ಥಾನ ನೀಡಿಲ್ಲ.

ಕೆಎಲ್ ರಾಹುಲ್: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಿದ್ದರು. ಇದಾಗ್ಯೂ ಟಿ20 ಸರಣಿಗೆ ರಾಹುಲ್ಗೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಐದು ಮ್ಯಾಚ್ಗಳ ಸರಣಿಯಲ್ಲಿ ಕೆಎಲ್ ರಾಹುಲ್ ಕೂಡ ಕಾಣಿಸಿಕೊಳ್ಳುವುದಿಲ್ಲ.

ನಿತೀಶ್ ಕುಮಾರ್ ರೆಡ್ಡಿ: ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಟೀಮ್ ಇಂಡಿಯಾ ಪರ ಈವರೆಗೆ 4 ಟಿ20 ಪಂದ್ಯಗಳನ್ನಾಡಿದ್ದಾರೆ. ಅದರಲ್ಲೂ ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಹಾರ್ದಿಕ್ ಪಾಂಡ್ಯ ಅವರ ಕಂಬ್ಯಾಕ್ ಬೆನ್ನಲ್ಲೇ ನಿತೀಶ್ ಕುಮಾರ್ ರೆಡ್ಡಿ ತಂಡದಿಂದ ಹೊರಬಿದ್ದಿದ್ದಾರೆ.

ರಿಂಕು ಸಿಂಗ್: ಭಾರತದ ಪರ 35 ಟಿ20 ಪಂದ್ಯಗಳನ್ನಾಡಿರುವ ರಿಂಕು ಸಿಂಗ್ ಅವರನ್ನು ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಕೈ ಬಿಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದ ರಿಂಕು ಅವರನ್ನು ಈ ಬಾರಿ ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂಬುದು ವಿಶೇಷ.

ರೋಹಿತ್ ಶರ್ಮಾ: 2024ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ರೋಹಿತ್ ಶರ್ಮಾ. ಆದರೆ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಹಿಟ್ಮ್ಯಾನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ ಅವರನ್ನು ಪರಿಗಣಿಸಲಾಗಿಲ್ಲ.

ರವೀಂದ್ರ ಜಡೇಜಾ: ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮತ್ತೋರ್ವ ಆಟಗಾರ ರವೀಂದ್ರ ಜಡೇಜಾ. ಚುಟುಕು ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ಜಡೇಜಾ ಇದೀಗ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನತ್ತ ಫೋಕಸ್ ಮಾಡಿದ್ದಾರೆ. ಹೀಗಾಗಿ ಅವರನ್ನೂ ಸಹ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ವಿರಾಟ್ ಕೊಹ್ಲಿ: ಟಿ20 ವಿಶ್ವಕಪ್ 2024 ರಲ್ಲಿ ಫೈನಲ್ ಪಂದ್ಯದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಚುಟುಕು ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕಿಂಗ್ ಕೊಹ್ಲಿ ಕೂಡ ಕಾಣಿಸಿಕೊಳ್ಳುವುದಿಲ್ಲ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಈ ಕೆಳಗಿನಂತಿದೆ...

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ)*, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್.

ಟೆಂಬಾ ಬವುಮಾ: ಏಕದಿನ ಸರಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದ ಟೆಂಬಾ ಬವುಮಾ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಅವರ ಬದಲಿಗೆ ಐಡೆನ್ ಮಾರ್ಕ್ರಾಮ್ ಸೌತ್ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಭಾರತ-ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯಲ್ಲಿ ಬವುಮಾ ಕೂಡ ಕಾಣಿಸಿಕೊಳ್ಳುವುದಿಲ್ಲ.

ಮ್ಯಾಥ್ಯೂ ಬ್ರೀಟ್ಝ್ಕೆ: ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಮ್ಯಾಥ್ಯೂ ಬ್ರೀಟ್ಝ್ಕೆ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಅವರ ಬದಲಿಗೆ ಫಿನಿಶರ್ ಆಗಿ ಟ್ರಿಸ್ಟನ್ ಸ್ಟಬ್ಸ್ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಮ್ಯಾಥ್ಯೂ ಬ್ರೀಟ್ಝ್ಕೆ ಕೂಡ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಟೋನಿ ಡಿ ಝೋರ್ಝಿ: ಸೌತ್ ಆಫ್ರಿಕಾ ತಂಡದ ಸ್ಫೋಟಕ ದಾಂಡಿಗ ಟೋನಿ ಡಿ ಝೋರ್ಝಿ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಬ್ಯಾಟಿಂಗ್ ನಡುವೆ ಕಾಲು ನೋವಿಗೆ ಸಿಲುಕಿದ್ದ ಝೋರ್ಝಿ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದೀಗ ಅವರ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದ್ದು, ಇದನ್ನು ಪರಿಶೀಲಿಸಿದ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ 5 ಪಂದ್ಯಗಳ ಸರಣಿಯಿಂದ ಝೋರ್ಝಿ ಹೊರಗುಳಿದಿದ್ದಾರೆ.

ಕ್ವೆನಾ ಮಫಕಾ: ಸೌತ್ ಆಫ್ರಿಕಾ ತಂಡದ ಯುವ ವೇಗಿ ಕ್ವೆನಾ ಮಫಕಾ ಎಡ ಮಂಡಿರಜ್ಜು ಸ್ನಾಯುವಿನ ಗಾಯದಿಂದ ಇನ್ನೂ ಸಹ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಸಹ ಸೌತ್ ಆಫ್ರಿಕಾ ಟಿ20 ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ವೇಗದ ಬೌಲರ್ ಲುಥೊ ಸಿಪಾಮ್ಲಾ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಅದರಂತೆ ಭಾರತದ ವಿರುದ್ಧದ ಟಿ20 ಸರಣಿಗೆ ಸೌತ್ ಆಫ್ರಿಕಾ ತಂಡ ಈ ಕೆಳಗಿನಂತಿದೆ...

ಸೌತ್ ಆಫ್ರಿಕಾ ಟಿ20 ತಂಡ: ಐಡನ್ ಮಾರ್ಕ್ರಾಮ್ (ನಾಯಕ), ಓಟ್ನಿಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಡೊನೊವನ್ ಫೆರೇರಾ, ರೀಝ ಹೆಂಡ್ರಿಕ್ಸ್, ಮಾರ್ಕೋ ಯಾನ್ಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯ, ಲುಥೋ ಸಿಪಮ್ಲಾ, ಟ್ರಿಸ್ಟನ್ ಸ್ಟಬ್ಸ್.