Updated on: Aug 02, 2023 | 6:41 AM
ವೆಸ್ಟ್ ಇಂಡೀಸ್ ವಿರುದ್ಧ ಟ್ರಿನಿಡಾಡ್‌ನ ತರೂಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 200 ರನ್ಗಳ ಬೃಹತ್ ಗೆಲುವು ದಾಖಲಿಸಿದೆ ಇದರೊಂದಿಗೆ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಇನ್ನು ಸರಣಿಯೂದ್ದಕ್ಕು ಮಾಡಿಕೊಂಡ ಬದಲಾವಣೆಯನ್ನು ಈ ಪಂದ್ಯದಲ್ಲೂ ಟೀಂ ಇಂಡಿಯಾ ಮಾಡಿತ್ತು. ವೇಗಿ ಉಮ್ರಾನ್ ಮಲಿಕ್ ಬದಲು, ತಂಡದಲ್ಲಿ ಸ್ಥಾನ ಪಡೆದಿದ್ದ ಜಯದೇವ್ ಉನದ್ಕಟ್ ಈ ರೀ ಎಂಟ್ರಿಯೊಂದಿಗೆ ಬರೋಬ್ಬರಿ 3539 ದಿನಗಳ ಬಳಿಕ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದು 27 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ವಾಸ್ತವವಾಗಿ 2013 ರ ಬಳಿಕ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ ಉನದ್ಕಟ್ ಎರಡು ಏಕದಿನ ಪಂದ್ಯಗಳ ನಡುವೆ ಸುದೀರ್ಘ ಅಂತರವನ್ನು ಹೊಂದಿರುವ ಭಾರತದ ಮೊದಲ ಆಟಗಾರನೆಂಬ ದಾಖಲೆ ಬರೆದಿದ್ದಾರೆ.
ಉನದ್ಕಟ್ಗೂ ಮೊದಲು, ಟೀಂ ಇಂಡಿಯಾದ ಮಾಜಿ ಆಟಗಾರ ರಾಬಿನ್ ಸಿಂಗ್ ಎರಡು ಏಕದಿನ ಪಂದ್ಯಗಳ ನಡುವೆ ಏಳು ವರ್ಷ, 230 ದಿನಗಳ ಅಂತರದೊಂದಿಗೆ ಈ ದಾಖಲೆಯನ್ನು ಹೊಂದಿದ್ದರು. ಆದರೆ ಇದೀಗ ಉನದ್ಕಟ್ 9 ವರ್ಷ 210 ದಿನಗಳ ಬಳಿಕ ಏಕದಿನ ಪಂದ್ಯ ಆಡಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ, ತಂಡದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಆಡಿದ ಎರಡು ಏಕದಿನ ಪಂದ್ಯಗಳ ನಡುವೆ 6 ವರ್ಷ, 160 ದಿನಗಳ ಅಂತರದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಏಪ್ರಿಲ್ 2003 ರಲ್ಲಿ ಕೊನೆಯದಾಗಿ ಏಕದಿನ ಪಂದ್ಯವನ್ನಾಡಿದ್ದ ಅಮಿತ್, ಆ ಬಳಿಕ 2009 ರ ಸೆಪ್ಟೆಂಬರ್ನಲ್ಲಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು.
ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್, ಆರು ವರ್ಷ, 133 ದಿನಗಳ ನಂತರ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಹಾಗೆಯೇ ಕನ್ನಡಿಗ ರಾಬಿನ್ ಉತ್ತಪ್ಪ ಐದು ವರ್ಷ, 344 ದಿನಗಳ ದೊಡ್ಡ ಅಂತರದ ನಂತರ ಏಕದಿನ ತಂಡದಲ್ಲಿ ಸ್ಥಾನ ಪಡೆದು, ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಏತನ್ಮಧ್ಯೆ, ವಿಶ್ವ ಕ್ರಿಕೆಟ್ನಲ್ಲಿ ಎರಡು ಏಕದಿನ ಪಂದ್ಯಗಳ ನಡುವೆ ಸುದೀರ್ಘ ಅಂತರವನ್ನು ಹೊಂದಿರುವ ಆಟಗಾರರ ಸಾರ್ವಕಾಲಿಕ ಪಟ್ಟಿಯಲ್ಲಿ ಜಯದೇವ್ ಉನದ್ಕಟ್ 8 ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಜೆಫ್ ವಿಲ್ಸನ್ ಅವರು 11 ವರ್ಷ, 331 ದಿನಗಳ ನಂತರ ತಮ್ಮ ದೇಶದ ಪರ ಏಕದಿನ ಪಂದ್ಯವನ್ನಾಡಿದ್ದು, ಇದುವರೆಗಿನ ದಾಖಲೆಯಾಗಿದೆ.