
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ 16 ಸದಸ್ಯರ ಟೀಂ ಇಂಡಿಯಾ ಪ್ರಕಟವಾಗಿದೆ. ಇದರಲ್ಲಿ ಭಾರತದ ಟೆಸ್ಟ್ ತಂಡ ಹೇಗಿದೆ ಎಂಬುದನ್ನು ನೋಡುವುದಾದರೆ...

ತಂಡದಲ್ಲಿ ಪ್ರಮುಖವಾಗಿ ಆಗಿರುವ ಬದಲಾವಣೆಯೆಂದರೆ, ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ಮೊದಲು ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪೂಜಾರ ಕಳಪೆ ಪ್ರದರ್ಶನ ನೀಡಿದ್ದರು. ಹಾಗಾಗಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ.

ಚೇತೇಶ್ವರ ಪೂಜಾರ ಟೆಸ್ಟ್ ತಂಡದಿಂದ ಹೊರನಡೆದಿರುವುದರಿಂದಾಗಿ ಅವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಆಡುವ ಸಾಧ್ಯತೆಗಳಿವೆ. ಜೈಸ್ವಾಲ್ ಈ ಹಿಂದೆ ಡಬ್ಲ್ಯುಟಿಸಿ ಫೈನಲ್ಗೆ ಟೀಂ ಇಂಡಿಯಾದಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದರು. ಹಾಗೆಯೇ ಕಳೆದ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಜೈಸ್ವಾಲ್ಗೆ ಇದೀಗ ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಖಚಿತವಾಗಿದೆ.

ಹಾಗೆಯೇ ಡಬ್ಲ್ಯುಟಿಸಿ ಫೈನಲ್ಗೆ ಟೀಂ ಇಂಡಿಯಾದಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ರುತುರಾಜ್ ಮದುವೆಯ ಕಾರಣದಿಂದಾಗಿ ಪ್ರವಾಸದಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ಪ್ರಕಟವಾಗಿರುವ ಟೆಸ್ಟ್ ತಂಡದಲ್ಲಿ ಸ್ಥಾನಗಿಟ್ಟಿಸುವಲ್ಲಿ ರುತುರಾಜ್ ಯಶಸ್ವಿಯಾಗಿದ್ದಾರೆ. ಆದರೆ ಆರಂಭಿಕರಾಗಿ ರೋಹಿತ್ ಹಾಗೂ ಗಿಲ್ ಇರುವುದರಿಂದ ರುತುರಾಜ್ ಅವರನ್ನು ಯಾವ ಆರ್ಡರ್ನಲ್ಲಿ ಆಡಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಎಂದಿನಂತೆ ರೋಹಿತ್ ಶರ್ಮಾ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದು, ಅಚ್ಚರಿಯೆಂಬಂತೆ ಅಜಿಂಕ್ಯ ರಹಾನೆ ಅವರನ್ನು ತಂಡಕ್ಕೆ ಉಪನಾಯಕನಾಗಿ ನೇಮಿಸಲಾಗಿದೆ. ಕಳೆದ ಕೆಲವು ತಿಂಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ರಹಾನೆಗೆ ಐಪಿಎಲ್ ಮರುಜನ್ಮ ನೀಡಿತ್ತು. ಆ ಬಳಿಕ ನಡೆದ ಡಬ್ಲ್ಯುಟಿಸಿ ಫೈನಲ್ನಲ್ಲಿ ರಹಾನೆ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ರಹಾನೆಗೆ ಟೀಂ ಇಂಡಿಯಾದ ಉಪನಾಯಕತ್ವ ಸಿಕ್ಕಿದೆ. ಇನ್ನುಳಿದಂತೆ ಟೀಂ ಇಂಡಿಯಾ ಹೀಗಿದೆ.

ಟಾಪ್ ಆರ್ಡರ್: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್,

ಮಿಡಲ್ ಆರ್ಡರ್: ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪನಾಯಕ), ಯಶಸ್ವಿ ಜೈಸ್ವಾಲ್

ವಿಕೆಟ್ ಕೀಪರ್ಸ್: ಕೆಎಸ್ ಭರತ್, ಇಶಾನ್ ಕಿಶನ್,

ಆಲ್ರೌಂಡರ್ಸ್: ಆರ್. ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್,

ಬೌಲಿಂಗ್ ವಿಭಾಗ: ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.