ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಈ ಸರಣಿಗಾಗಿ ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಮುಖೇಶ್ ಕುಮಾರ್ ಅವರಂತಹ ಯುವ ಪ್ರತಿಭೆಗಳು ಮೊದಲ ಬಾರಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ.
ಆದಾಗ್ಯೂ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರಿಗೆ ಮತ್ತೊಮ್ಮೆ ವಿಶ್ರಾಂತಿ ನೀಡಲಾಗಿದ್ದು, ಚುಟುಕು ಮಾದರಿಯಲ್ಲಿ ಈ ಇಬ್ಬರು ದಿಗ್ಗಜರ ವೃತ್ತಿಜೀವನ ಅಂತ್ಯವಾಯಿತಾ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವರನ್ನು ಹೊರಗಿಡಲಾಗಿದ್ದು, ಸತತ ನಾಲ್ಕನೇ ಟಿ20 ಸರಣಿಯಿಂದ ಈ ಇಬ್ಬರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿದ್ದಾರೆ. ಇಬ್ಬರೂ ಅಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಲಿದ್ದಾರೆ. ಆದರೆ ಜುಲೈ 5 ರಿಂದ ನಡೆಯಲಿರುವ ಟಿ20 ಸರಣಿಗೆ ರೋಹಿತ್ ಹಾಗೂ ವಿರಾಟ್ ಆಯ್ಕೆಯಾಗಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಟಿ20 ನಾಯಕತ್ವದ ಜೊತೆಗೆ ಆಟಗಾರನಾಗಿ ರೋಹಿತ್ ಅವರನ್ನು ಈ ಮಾದರಿಯಿಂದ ದೂರ ತಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ ಟಿ20 ವಿಶ್ವಕಪ್ 2024 ಅನ್ನು ಗಮನದಲ್ಲಿಟ್ಟುಕೊಂಡು ರೋಹಿತ್-ವಿರಾಟ್ ವಿಚಾರದಲ್ಲಿ ಮ್ಯಾನೇಜ್ಮೆಂಟ್ ಈ ರೀತಿಯ ನಿರ್ಧಾರ ಕೈಗೊಂಡಿದ್ದೇಯೇ ಎಂಬ ಅನುಮಾನ ಮೂಡಿದೆ.
ವಾಸ್ತವವಾಗಿ ರೋಹಿತ್-ವಿರಾಟ್ ಟಿ2ಗೆ ಆಯ್ಕೆಯಾಗದೇ ಇರುವುದು ಇದೇ ಮೊದಲಲ್ಲ. 2022ರ ಟಿ20 ವಿಶ್ವಕಪ್ ನಂತರ ಈ ಇಬ್ಬರು ಸತತ ನಾಲ್ಕನೇ ಸರಣಿಯಿಂದ ಹೊರಗುಳಿದಂತ್ತಾಗಿದೆ. ವಿಂಡೀಸ್ ವಿರುದ್ಧದ ಟಿ20 ಸರಣಿಗೂ ಮುನ್ನ , ರೋಹಿತ್-ವಿರಾಟ್ ಕಳೆದ ವರ್ಷ ನ್ಯೂಜಿಲೆಂಡ್ ಪ್ರವಾಸದಲ್ಲಿ ಟಿ20 ತಂಡದಿಂದ ಹೊರಗುಳಿದಿದ್ದರು.
ಇದರ ನಂತರ, ಈ ವರ್ಷ ಶ್ರೀಲಂಕಾ ಮತ್ತು ನಂತರ ನ್ಯೂಜಿಲೆಂಡ್ ವಿರುದ್ಧದ ತವರಿನ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದಾಗ, ಅಲ್ಲಿ ರೋಹಿತ್ ಹಾಗೂ ವಿರಾಟ್ ಹೆಸರು ಕಾಣೆಯಾಗಿತ್ತು. ಇದೀಗ ವಿಂಡೀಸ್ ಸರಣಿಯಿಂದ ಹೊರಗುಳಿದಿರುವುದು ಇಬ್ಬರ ಟಿ20 ಕೆರಿಯರ್ ಮುಗಿಯಿತು ಎಂಬ ಸಂದೇಶ ನೀಡುತ್ತಿದೆ.